ಚೆನ್ನೈ, ಅ.1- ಪ್ರವಾಸಿ ಬಸ್ಸೊಂದು ಪ್ರಪಾತಕ್ಕೆ ಬಿದ್ದು 8 ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ನೀಲಗಿರೀಸ್‍ನಲ್ಲಿ ನಡೆದಿದೆ. ಊಟಿಯಿಂದ ವಾಪಸ್ ಆಗುತ್ತಿದ್ದಾಗ ಸುಮಾರು 55 ಜನ ಪ್ರವಾಸಿಗರಿದ್ದ ಬಸ್ ನೀಲಗಿರೀಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಆರು ಮಂದಿ ಸಾವನ್ನಪ್ಪಿದರೆ, ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಸ್ಥಳೀಯರು, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಪಡೆ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಿನ್ನೆ ಸಂಜೆ 5.15 ರ ಸುಮಾರಿನಲ್ಲಿ ಊಟಿಯಿಂದ ತೆಂಕೇಶಿ ಕಡೆಗೆ ಬಸ್ ಬರುತ್ತಿತ್ತು. ಈ ಸಂದರ್ಭದಲ್ಲಿ ಕುನೂರಿನಿಂದ ಮೆಟ್ಟುಪಾಳ್ಯಂ ರಸ್ತೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿಬಿದ್ದಿದೆ. ಬಸ್ ಉರುಳಿಬಿದ್ದ ರಭಸಕ್ಕೆ ಹಲವಾರು ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಬಸ್ಸನ್ನು ರೋಪ್ ಸಹಾಯದಿಂದ ಮೇಲೆತ್ತಬೇಕಾಯಿತು. ಗಾಯಾಳುಗಳನ್ನು ಕೊಯಮತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿ ಮೂವರೂ ನೀರುಪಾಲು
ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾಗಿರುವವರಿಗೆ 50 ಸಾವಿರ ರೂ. ಪರಿಹಾರ ಪ್ರಕಟಿಸಿದ್ದಾರೆ.