ಕೊಪ್ಪಳ,ಏ.4- ರಾಜ್ಯದ ಆಟೋ ಚಾಲಕರಿಗೆ ರಾಜ್ಯ ಸರ್ಕಾರವು 6ನೇ ಗ್ಯಾರಂಟಿಯನ್ನು ಘೋಷಣೆ ಮಾಡಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಸಿಂಧನೂರಿನ ಹೊಸಹಳ್ಳಿ ಇ.ಜೆ.ಕ್ಯಾಂಪಿನಲ್ಲಿರುವ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಗೆ ಮಂಜೂರಾಗಿರುವ ಸೈನಿಕ ಶಾಲೆಯ ಉದ್ಘಾಟನೆಗೆ ಆಗಮಿಸಿದ ಕೇಂದ್ರ ಸಚಿವರು ತಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಕೆಲ ನಾಯಕರು ಕೇಂದ್ರ ಸರ್ಕಾರದ ಮೇಲೆ ಟೀಕೆ ಮಾಡುತ್ತಿದ್ದಾರೆ. ಅದರ ಸಮಾನಂತರವಾಗಿ ಆಟೋ ಚಾಲಕರು ಬಳಸುವ ಇಂಧನದ ಮೇಲೆ ತೆರಿಗೆಯನ್ನು ಈ ಸರ್ಕಾರ ವಿಧಿಸಿದೆ. ಹೀಗಾಗಿ ಆ ತೆರಿಗೆಯನ್ನು ವಾಪಸ್ ಪಡೆಯಬೇಕು ಹಾಗೂ ಈಗಾಗಲೇ ಐದು ಗ್ಯಾರಂಟಿಗಳನ್ನು ಕೊಟ್ಟ ಹಾಗೆ ಆಟೋ ಚಾಲಕರಿಗೆ 6ನೇ ಗ್ಯಾರಂಟಿಯನ್ನು ಕೊಡಲಿ ಎಂದು ಆಗ್ರಹಿಸಿದರು.
ಜಗತ್ತಿನಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿ ಸಂಕಷ್ಟ ಪರಿಸ್ಥಿತಿ ಉಂಟಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ಕೇಂದ್ರ ಸರ್ಕಾರವು ನಿಭಾಯಿಸುತ್ತಿದೆ. ಆದರೆ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯನವರು ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವರು ಟೀಕಿಸಿದರು.
ಈ ಪರಿಸ್ಥಿತಿ ಸರಿ ಹೋಗುವವರೆಗೆ ಮಾಸಿಕ 15,000 ಗ್ಯಾರಂಟಿ ಕೊಡಿ ಎಂದು ಆಟೋ ಚಾಲಕರು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಭಾಗ್ಯಗಳನ್ನು ನೀಡಿರುವ ಆಟೋ ಚಾಲಕರಿಗೆ ಮತ್ತೊಂದು ಗ್ಯಾರಂಟಿಯನ್ನು ಕೊಡಲಿ. 6ನೇ ಗ್ಯಾರಂಟಿಯನ್ನು ಕೊಟ್ಟು ಗೌರವಿತವಾಗಿ ಸರ್ಕಾರ ನಡೆದುಕೊಳ್ಳಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದು ಹೇಳಿದರು.
ಈಗ ಉಂಟಾಗಿರುವ ತೈಲ ಬಿಕ್ಕಟ್ಟು ನಾವು ತಂದುಕೊಂಡಿರುವ ಸಮಸ್ಯೆಯಲ್ಲ. ಕೊಲ್ಲಿ ಭಾಗದಲ್ಲಿ ಉಂಟಾಗಿರುವ ಯುದ್ಧವೇ ಇದಕ್ಕೆ ಕಾರಣ. ಭಾರತ ಈ ಸಮಸ್ಯೆಯನ್ನು ಬಯಸಿ ತಂದುಕೊಳ್ಳಲಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆದಾಗ್ಯೂ ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗದಂತೆ ಪರಿಸ್ಥಿತಿ ನಿರ್ವಹಿಸುವ ಕೆಲಸವನ್ನು ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಿದೆ. ಕಷ್ಟದ ಪರಿಸ್ಥಿತಿಯಲ್ಲೂ ಕೂಡ ಭಾರತಕ್ಕೆ ತೈಲ ಹಡಗುಗಳು ನಿರಾಯಾಸವಾಗಿ ಬರುತ್ತಿವೆ. ಮೋದಿ ಅವರ ಸರ್ಕಾರ ಕೈಗೊಂಡ ಕ್ರಮಗಳೇ ಉತ್ತಮ ಪರಿಸ್ಥಿತಿಗೆ ಕಾರಣ ಎಂದು ತಿಳಿಸಿದರು.
ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಏನು ಮಾಡುತ್ತಿತ್ತು? ಅವರೇನು ಎಲ್ಲವನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದರಾ? ಅನಗತ್ಯವಾಗಿ ಟೀಕೆ ಮಾಡುವುದು ಸರಿಯಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ಎಷ್ಟೋ ಪರಿಸ್ಥಿತಿಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಸರಪಳಿಯಲ್ಲಿ ಅಂತಹ ದೊಡ್ಡ ಮಟ್ಟದ ವ್ಯತ್ಯಾಸ ಆಗಿಲ್ಲ. ಸುಖಾಸುಮನೆ ಸರ್ಕಾರವನ್ನು ರಾಜಕೀಯವಾಗಿ ಟೀಕಿಸುವುದು ತಪ್ಪಾಗುತ್ತದೆ ಎಂದು ಸಚಿವರು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಚಂದ್ರಶೇಖರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಎನ್ಡಿಎ ನಾಯಕರು ಸಚಿವರ ಜೊತೆಯಲ್ಲಿ ಇದ್ದರು.
