ಬೆಂಗಳೂರು,ಡಿ.26- ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಕಂಠಪೂರ್ತಿ ಕುಡಿದು ವಾಹನ ಚಾಲನೆ ಮಾಡಿದರೆ ಜೋಕೆ… ಬೀಳುತ್ತೆ ಕೇಸ್.
ಅಪಘಾತ ಮುಕ್ತ ವರ್ಷಾಚರಣೆ ಮಾಡಿ: ವಾಹನ ಸವಾರರು ಮದ್ಯಪಾನ ಮಾಡದಿರುವ ಹಾಗೆ ಸ್ನೇಹಿತರು ಅವರನ್ನು ಎಚ್ಚರಿಸಬೇಕು. ಸುರಕ್ಷಿತವಾಗಿ ಇತರೆ ವಾಹನ ಸವಾರರ ಹಾಗೂ ಪಾದಚಾರಿಗಳ ಸುರಕ್ಷತೆ ಕಾಪಾಡುವುದರ ಜೊತೆಗೆ ಹೊಸ ವರ್ಷವನ್ನು ಅಪಘಾತ ಮುಕ್ತ ಮತ್ತು ಜನಸ್ನೇಹಿಯಾಗಿ ಮಾಡಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿಂದು ಮನವಿ ಮಾಡಿದ್ದಾರೆ.
ವಿಶೇಷ ಕಾರ್ಯಾಚರಣೆ:
ನಗರದಾದ್ಯಂತ ಡಿಸೆಂಬರ್ 31ರಂದು ರಾತ್ರಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ. ನಾಕಾಬಂಧಿಯನ್ನು ನಗರದ ವಿವಿಧ ಸ್ಥಳಗಳಲ್ಲಿ ಮಾಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಎಲ್ಲ ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ.
ವೀಲ್ಹಿಂಗ್ ಮಾಡಿದರೆ ಕಠಿಣ ಕ್ರಮ:
ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ, ವೀಲ್ಹಿಂಗ್, ಡ್ಯ್ರಾಗ್ ರೇಸ್‍ನಲ್ಲಿ ಭಾಗಿಯಾಗಿ ಇತರೆ ಸಾರ್ವಜನಿಕರಿಗೆ ಅನಾನುಕೂಲ ಮಾಡುವಂತಹ ಮೋಟಾರ್ ಸೈಕಲ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಸಹಾಯವಾಣಿ 112ಗೆ ಮಾಹಿತಿ ನೀಡಲು ಕೋರಲಾಗಿದೆ.
ಎಲ್ಲಾ ಮೇಲ್ಸೇತುವೆಯಲ್ಲಿ ಸಂಚಾರ ನಿಷೇಧ:
ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1 ಬೆಳಗಿನ ಜಾವ 6 ಗಂಟೆವರೆಗೆ ನಗರದ ಎಲ್ಲ( ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆಯನ್ನು ಹೊರತುಪಡಿಸಿ) ಮೇಲುಸೇತುವೆಗಳ ಮೇಲೆ ಅಪಘಾತಗಳು, ಬೀಳುವುದು ಇತ್ಯಾದಿ ಅನಾಹುತಗಳನ್ನು ತಡೆಗಟ್ಟಲು ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ರಾಜ್ಯ ಬಿಜೆಪಿಯಲ್ಲಿ ಮತ್ತೆ ಪಾರುಪತ್ಯ ಸಾಧಿಸಿದ ಬಿಎಸ್‍ವೈ
ಸಂಚಾರ ನಿರ್ಬಂಧ:
ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಸೆಂಟ್ ಮಾಕ್ರ್ಸ್ ರಸ್ತೆ, ರೆಸ್ಟ್‍ಹೌಸ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಲುಗಡೆಯನ್ನು ಡಿ.31ರಿಂದ ಮಾರನೆ ದಿನ ಬೆಳಗಿನ ಜಾವ 1 ಗಂಟೆವರೆಗೆ ನಿರ್ಬಂಧಿಸಲಾಗಿದೆ. ಎಂಜಿರಸ್ತೆ, ಅನಿಲ್‍ಕುಮಾರ್ ವೃತ್ತದಿಂದ ರೆಸಿಡೆನ್ಸಿ ರಸ್ತೆವರೆಗೆ, ಬ್ರಿಗೇಡ್ ರಸ್ತೆಯಿಂದ ಅಪೇರಾ ಜಂಕ್ಷನ್‍ವರೆಗೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ ಹಾಗೂ ಎಂಜಿರಸ್ತೆ ಜಂಕ್ಷನ್‍ವರೆಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ನಿಲುಗಡೆ ನಿಷೇಧ:
ಡಿಸೆಂಬರ್ 31ರಂದು ಸಂಜೆ 4 ಗಂಟೆಯಿಂದ ಜನವರಿ 1ರಂದು ಬೆಳಗಿನ ಜಾವ 3 ಗಂಟೆವರೆಗೆ ಪೊಲೀಸ್ ವಾಹನಗಳು ಹಾಗೂ ಕರ್ತವ್ಯನಿರತ ತುರ್ತು ಸೇವಾ ವಾಹನಗಳು ಹೊರತುಪಡಿಸಿ ಉಳಿದ ವಾಹನಗಳ ನಿಲುಗಡೆಯನ್ನು ಎಂಜಿರಸ್ತೆ,ಅನಿಲ್‍ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಚರ್ಚ್‍ಶೀಟ್, ಬ್ರಿಗೇಡ್ ರಸ್ತೆ ಜಂಕ್ಷನ್‍ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್, ಹಳೇ ಮದ್ರಾಸ್ ಬ್ಯಾಂಕ್ ವೃತ್ತದವರೆಗೆ ನಿಷೇಧಿಸಲಾಗಿದೆ.
ತಪ್ಪಿದ್ದಲ್ಲಿ ದಂಡ:
ಈ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಮಾಲೀಕರು-ಚಾಲಕರು ತಮ್ಮ ವಾಹನಗಳನ್ನು ಅಂದು ತೆರವುಗೊಳಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಪರ್ಯಾಯ ಮಾರ್ಗ:
ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂಜಿರಸ್ತೆ ಜಂಕ್ಷನ್‍ನಿಂದ ಅಪೇರ ಜಂಕ್ಷನ್ ಕಡೆಗೆ ಹೋಗಬಹುದಾಗಿದೆ. ಪುನಃ ಎಂಜಿರಸ್ತೆಗೆ ಬರಬೇಕಾದರೆ ರೆಸಿಡೆನ್ಸಿ ರಸ್ತೆ ಕ್ರಾಸ್ ಮಾರ್ಗವಾಗಿ ಬರಬಹುದಾಗಿದೆ. ನಗರದ ಎಲ್ಲ ನಾಗರಿಕರಿಗೆ ಪೊಲೀಸ್ ಇಲಾಖೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳನ್ನು ಕೋರುತ್ತಾ ಶೂನ್ಯ ಅಪಘಾತ ಹಾಗೂ ಸುರಕ್ಷತೆಯಿಂದ ಹೊಸ ವರ್ಷವನ್ನು ನಿರೀಕ್ಷಿಸೋಣ ಎಂದು ಆಶಿಸಿದೆ.