ಬೆಂಗಳೂರು,ಡಿ.26-ಯುವ ನಿಧಿ ಯೋಜನೆಯಡಿ ನೋಂದಾಯಿತ ಪದವಿ ಹಾಗೂ ಡಿಫ್ಲೋಮೊದಾರರಿಗೆ ನಿರುದ್ಯೋಗ ಭತ್ಯೆಯ ಜೊತೆಗೆ ಕೌಶಲ್ಯ ತರಬೇತಿಯನ್ನೂ ಕೊಟ್ಟು ಉದ್ಯೋಗ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ರಾಜ್ಯದಲ್ಲಿ 5.29 ಲಕ್ಷ ಪದವಿಧರರು ಇದ್ದಾರೆ. ಅವರಲ್ಲಿ 4.20 ಲಕ್ಷ ಪದವೀಧರರು ಇದ್ದರೆ, 48 ಸಾವಿರ ಡಿಫ್ಲೋಮೊ ಪದವಿ ಪಡೆದವರಿದ್ದಾರೆ. ಅಷ್ಟೂ ಮಂದಿಗೆ ನಿರುದ್ಯೋಗ ಭತ್ಯೆ ನೀಡಲು ಮಾರ್ಚ್‍ವರೆಗೂ 250 ಕೋಟಿ ರೂ.ಗಳ ಹಣ ಅಗತ್ಯವಿದ್ದು, ಅಷ್ಟನ್ನು ಒದಗಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದಕ್ಕಾಗಿ ಈ ವರ್ಷಕ್ಕೆ 39000 ಕೋಟಿ ರೂ.ಗಳನ್ನ ತಾವು ಮಂಡಿಸಿದ ಬಜೆಟ್‍ನಲ್ಲಿ ಕಾಯ್ದಿರಿಸಿದ್ದಾಗಿ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸುಧಾರಣೆಯಾಗಲಿದೆ : ಸಿದ್ದರಾಮಯ್ಯ
ಮೋದಿ ಆರ್ಥಿಕ ತಜ್ಞರೇ?:
ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಸಿದ್ದರಾಮಯ್ಯನವರು, ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಜಾರಿಯಾದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಮೋದಿಯವರು ರಾಜಸ್ಥಾನದ ಚುನಾವಣಾ ಪ್ರಚಾರದ ವೇಳೆ ಟೀಕೆ ಮಾಡಿದ್ದರು. ಅವರೇನು ಆರ್ಥಿಕ ತಜ್ಞರೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಾವು 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಅದರ ನಂತರವು ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಿದರು.
ನಮ್ಮ ಪಕ್ಷದ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಪ್ರಧಾನಿಯವರು, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸ್‍ಘಡ, ತೆಲಂಗಾಣ ಸೇರಿದಂತೆ ಎಲ್ಲ ಕಡೆಯೂ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ನಾವು ಜನರಿಗೆ ಭರವಸೆಗಳನ್ನು ನೀಡಿದರೆ ಟೀಕೆ ಮಾಡುತ್ತಾರೆ. ಆದರೆ ಅವರು ನೀಡಿದಾಗ ಆರ್ಥಿಕ ದಿವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಪಂಚಖಾತ್ರಿಗಳ ಯೋಜನೆ ಜಾರಿಯಲ್ಲಿ ವಿಳಂಬವಾಗಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತವೆ. ಮೊದಲ ಸಂಪುಟದಲ್ಲೇ 5 ಖಾತ್ರಿಗಳನ್ನು ಜಾರಿಗೊಳಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ.
ಯುವ ನಿಧಿ ಯೋಜನೆ 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿ ಆರು ತಿಂಗಳು ಉದ್ಯೋಗ ದೊರೆಯದೆ ಇರುವವರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಯಾಗಿದ್ದು, ಈಗ ಆರು ತಿಂಗಳ ಕಾಲಾವಧಿ ಮುಗಿದಿದ್ದು, ಸಕಾಲದಲ್ಲಿ ಯುವನಿಧಿ ಯೋಜನೆ ಜಾರಿಯಾಗುತ್ತಿದೆ. ಯಾವುದೇ ವಿಳಂಬವಾಗಿಲ್ಲ. ಎರಡು ವರ್ಷಗಳವರೆಗೂ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಲಾಗುವುದು ಎಂದು ಹೇಳಿದರು.
ಮೋದಿಯವರು ಚುನಾವಣೆಗೂ ಮುನ್ನ ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದರು. ಅದರ ಪ್ರಕಾರ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿವೆ ಆ ಉದ್ಯೋಗಗಳು ಎಂದು ಸಿಎಂ ಪ್ರಶ್ನಿಸಿದರು.
ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಮೋದಿಯವರು ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸದೆ ಮಾತು ತಪ್ಪಿದ್ದಾರೆ. ಸ್ವತಂತ್ರ ನಂತರ ದೇಶ ಕಂಡ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿ ಎಂದು ವಾಗ್ದಾಳಿ ನಡೆಸಿದರು.
ವೈದ್ಯಕೀಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ಹೆಚ್ಚು ಷರತ್ತುಗಳನ್ನು ವಿಸದೆ ಯುವ ನಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ನಮಗೆ ಯುವಕರ ಮೇಲೆ ನಂಬಿಕೆ ಇದೆ. ಉದ್ಯೋಗ ಇಲ್ಲ ಎಂದು ಸ್ವಯಂ ಘೋಷಣೆ ಮಾಡಿಕೊಂಡರೆ ಸಾಕು ನಿರುದ್ಯೋಗ ಭತ್ಯೆ ದೊರೆಯುತ್ತದೆ.
ನಿಗದಿತ ಕಾಲಾವಧಿಯಲ್ಲಿ ಯೋಜನೆ ಜಾರಿಗೆ ತಂದಿದ್ದೇವೆ. ಯುವಕರ ಭವಿಷ್ಯದ ಬಗ್ಗೆ ನಮಗೆ ಹೆಚ್ಚು ಕಾಳಜಿ ಇದೆ. ನಿರುದ್ಯೋಗ ಭತ್ಯೆ ಜೊತೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ಖಾಸಗಿ ಸಂಸ್ಥೆಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಹೊಸ ವರ್ಷಾಚರಣೆಗೆ : ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಡ್ರೋಣ್ ಕಣ್ಗಾವಲು
ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಯುವಕ-ಯುವತಿಯರಿಂದಲೇ ಉದ್ಘಾಟನೆ ಮಾಡಿಸಲಾಯಿತು. ಮೊದಲು ನೋಂದಣಿ ಮಾಡಿಕೊಂಡ ಮೇನಕ ಎಂಬ ಪದವೀಧದರರಿಗೆ ಮುಖ್ಯಮಂತ್ರಿ ನೋಂದಣಿ ಪತ್ರವನ್ನು ವಿತರಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದ ಪೋಸ್ಟರ್ ಮತ್ತು ಲಾಂಛನವನ್ನು ಅನಾವರಣಗೊಳಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಉಪಸ್ಥಿತರಿದ್ದರು.