ಬೆಂಗಳೂರು, ಡಿ.4- ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯ ಹುದ್ದೆ ಬಿಟ್ಟು ಕೊಡಲೇಬೇಕು ಎಂಬ ಅನಿವಾರ್ಯತೆ ಸೃಷ್ಟಿಯಾಗುತ್ತಿದ್ದಂತೆ, ಸಿದ್ದರಾಮಯ್ಯ ಅವರ ಬಣದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿಯ ಬೇಡಿಕೆ ಮುನ್ನೆಲೆಗೆ ಬರುತ್ತಿದೆ.
2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ದಲಿತ ಮುಖ್ಯಮಂತ್ರಿ ಎಂಬ ಕೊಡೆೆ ಹಿಡಿದುಕೊಂಡೇ ನಾಯಕತ್ವ ಬದಲಾವಣೆ ಎಂಬ ಬಿರುಮಳೆಯಿಂದ ಪಾರಾಗಿದ್ದರು. ಆ ಸಂದರ್ಭದಲ್ಲಿ ಕೆ.ಎಚ್.ಮುನಿಯಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೆರವಾಗಿದ್ದರು. ಈಗ ಡಾ.ಜಿ.ಪರಮೇಶ್ವರ್ ಬೆಂಗಾವಲಾಗಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದ್ದಂತೆ ಕಂಡು ಬಂದಿದ್ದರೂ, ಒಳಗೊಳಗೆ ಕುರ್ಚಿಯ ಗುದ್ದಾಟ ಜೋರಾಗಿದೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಡಿಕೆ ಶಿವಕುಮಾರ್ ತಮದೇ ಆದ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಮೇಲ್ನೋಟಕ್ಕೆ ಡಿ.ಕೆ.ಶಿವಕುಮಾರ್ ಯಾವುದೇ ಭಿನ್ನಮತ ಚಟುವಟಿಕೆ ಮಾಡುತ್ತಿಲ್ಲ ಎಂದು ಕಂಡು ಬರುತ್ತಿದ್ದರೂ ಒಳಗೊಳಗೆ ಅಧಿಕಾರ ಬಿಟ್ಟು ಕೊಡುವ ಅನಿವಾರ್ಯ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಅವರಿಗೆ ತಂದಿಡುತ್ತಿದ್ದಾರೆ.
ಅಧಿಕಾರ ಶಾಶ್ವತ ಅಲ್ಲ ಯಾವತ್ತಾದರೂ ಬಿಟ್ಟು ಕೊಡಲೇಬೇಕು ಎಂಬ ವೈರಾಗ್ಯದ ಮಾತುಗಳನ್ನು ಸಿದ್ದರಾಮಯ್ಯ ಆಡುತ್ತಿದ್ದಾರೆ. ಅವರ ಬೆಂಬಲಿಗರು ಅದಕ್ಕೆ ಧ್ವನಿಗೂಡಿಸುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಮೊದಲ ಬಾರಿಗೆ ಅಧಿಕಾರ ಹಂಚಿಕೆಯ ವೇದಿಕೆ ಸಿದ್ಧಗೊಂಡಿರುವ ಬಗ್ಗೆ ಸುಳಿವು ನೀಡಿದ್ದರು. ಮತ್ತೊಂದೆಡೆ ಸಿದ್ದರಾಮಯ್ಯ ಅವರ ರಕ್ಷಣೆಗಾಗಿ ಸತೀಶ್ ಜಾರಕಿಹೊಳಿ ನಾನಾ ರೀತಿಯ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಸಚಿವರಾದ ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವರ ಜೊತೆ ಅವರ ಜೊತೆ ರಹಸ್ಯ ಸಭೆಗಳನ್ನು ನಡೆಸಿ ಸಿದ್ದರಾಮಯ್ಯ ಅವರಿಗೆ ಆನೆ ಬಲ ತಂದು ಕೊಡುವ ಪ್ರಯತ್ನ ನಡೆಸಿದ್ದರು.
ಕಾಂಗ್ರೆಸ್ ಸರ್ಕಾರ ರಚನೆಯಾದ ದಿನದಿಂದಲೂ ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಹಲವಾರು ಉಪಾಹಾರ ಹಾಗೂ ಭೋಜನಕೂಟಗಳನ್ನು ನಡೆಸಿ ಸಿದ್ದರಾಮಯ್ಯ ಪರ ಬಲ ಕ್ರೋಢೀಕರಣಕ್ಕೆ ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಈ ಪ್ರತ್ಯೇಕ ಸಭೆಗಳನ್ನು ಸೌಜನ್ಯದ ಭೇಟಿಯಷ್ಟೇ ಎಂದು ಹೇಳಿ ಯಾಮಾರಿಸಲಾಗುತ್ತಿತ್ತು. ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ದರಾಮಯ್ಯ ಅವರ ತಂಡ ಆರಂಭದಿಂದಲೂ ವ್ಯವಸ್ಥಿತವಾದ ಸಭೆಗಳನ್ನು ನಡೆಸಿಕೊಂಡು ಬಂದಿದೆ ಎಂಬುದು ಮನವರಿಕೆಯಾಗುತ್ತಿದೆ.
ಭವಿಷ್ಯದ ರಾಜಕೀಯ ಅಪಾಯವನ್ನು ಅರಿತು ಮೊದಲಿನಿಂದಲೂ ಸಿದ್ದು ಬಣ ಪ್ರತಿತಂತ್ರ ರೂಪಿಸಿತ್ತು ಎಂಬುದು ಖಚಿತವಾಗಿದೆ. ಈಗ ಕುರ್ಚಿ ಕಂಟಕ ಅಂತಿಮ ಘಟ್ಟಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಸಿದ್ದು ಬಣದ ನಾಯಕರು, ಸಚಿವರು ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ನಿನ್ನೆ ಮೊನ್ನೆ ಕೂಡ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಮತ್ತು ಬಿ.ಕೆ.ಹರಿಪ್ರಸಾದ್ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ.
ಬಿಜೆಪಿಯತ್ತ ಮುಖ ಮಾಡಿ, ತಮ ಪುತ್ರನನ್ನು ಬಿಜೆಪಿ ನಾಯಕರ ಜೊತೆ ಸಂಧಾನಕ್ಕೆ ಅಣಿ ಮಾಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಪಕ್ಷದ ವರಿಷ್ಠ ಮಂಡಳಿಗೆ ಎಚ್ಚರಿಕೆ ನೀಡುವ ಪ್ರಯತ್ನ ನಡೆಸಿದ್ಧಾರೆ. ಸಿದ್ದರಾಮಯ್ಯ ಅವರನ್ನು ಬದಲಾಯಿಸಬಾರದು ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ದಲಿತ ಮುಖ್ಯಮಂತ್ರಿಯನ್ನಾಗಿ ಪರಮೇಶ್ವರ್ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ತಪ್ಪಿಸಲು ಮತ್ತೊಂದು ಸುತ್ತಿನ ತಂತ್ರ-ಪ್ರತಿತಂತ್ರಗಳು ಚಾಲೂಗೊಂಡಿವೆ.
2013 ರಿಂದ 18ರ ನಡುವೆ ಆಗ ಇದೇ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಮುಖ್ಯಮಂತ್ರಿ ಹುದ್ದೆಗೆ ಸಮೀಪ ಸ್ಪರ್ಧೆ ನಡೆಸಿದರು. ಆದರೆ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಸೋಲು ಕಂಡಿದ್ದರಿಂದಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಲವಾದ ಹಕ್ಕು ಪ್ರತಿಪಾದಿಸುವ ನೈತಿಕ ಬಲ ಕಡಿಮೆಯಿತ್ತು. ವಿಧಾನಪರಿಷತ್ ಸದಸ್ಯರಾಗಿ ಸಚಿವರಾದರೂ ಕೂಡ ಪರಮೇಶ್ವರ್ ಅವರಿಗೆ ಸೋಲಿನ ಮುಜುಗರದಿಂದಾಗಿ ಮುಖ್ಯಮಂತ್ರಿ ಹುದ್ದೆಗಾಗಿ ಗಟ್ಟಿ ಧ್ವನಿ ಎತ್ತಲಾಗಲಿಲ್ಲ.
ಒಂದೆರಡು ಬಾರಿ ಹೇಳಿಕೆ ನೀಡಿದಾಗ ಕೆ.ಎಚ್.ಮುನಿಯಪ್ಪ ತಾವು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳುತ್ತಾ ಪರಮೇಶ್ವರ್ ಅವರಿಗೆ ಅಡ್ಡಗಾಲು ಹಾಕುತ್ತಿದ್ದರು.
ಈಗ ಪರಿಸ್ಥಿತಿ ಹಾಗಿಲ್ಲ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್, ಚುನಾವಣೆಯಲ್ಲೂ ಗೆದ್ದಿದ್ದಾರೆ. ದೆಹಲಿಯಲ್ಲಿ ನಡೆದಿದೆ ಎನ್ನಲಾದ ಒಪ್ಪಂದದ ಪ್ರಕಾರ ಅಧಿಕಾರ ಬಿಟ್ಟುಕೊಡಲೇಬೇಕಾದ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂದೊದಗಿದೆ. ಹೀಗಾಗಿ ಕೊನೆಯ ಪ್ರಯತ್ನ ಎಂಬಂತೆ ದಲಿತ ಮುಖ್ಯಮಂತ್ರಿ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ.
ಸಾರ್ವಜನಿಕವಾಗಿ ಇದು ವ್ಯಾಪಕ ಚರ್ಚೆಯಾಗಿ ಮುಕ್ತ ವಾತಾವರಣ ನಿರ್ಮಾಣವಾದರೆ, ಹೈಕಮಾಂಡ್ ಕೂಡ ಇಕ್ಕಟ್ಟಿಗೆ ಸಿಲುಕಲಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಲಿಲ್ಲ. ಇದೇ ಸಿದ್ದರಾಮಯ್ಯ ಅವರೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಸ್ಪರ್ಧಿಯಾಗಿ ನಿಂತು ರಾಷ್ಟ್ರ ರಾಜಕಾರಣಕ್ಕೆ ಹೋಗುವಂತೆ ಮಾಡಿದ್ದರು. ಈಗ ಖರ್ಗೆ ಹೈಕಮಾಂಡ್ ನಾಯಕರಲ್ಲಿ ಪ್ರಮುಖರಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಅವರಿಗೆ ಖರ್ಗೆ ಅವರ ಕೃಪಾಶೀರ್ವಾದ ಇದೆ. ಹೀಗಾಗಿ ಸಿದ್ದರಾಮಯ್ಯ ಅವರು ಖರ್ಗೆ ಅವರ ಬದಲಾಗಿ ರಾಹುಲ್ ಗಾಂಧಿ ಹೇಳಿದಂತೆ ಕೇಳುತ್ತೇನೆ ಎಂದು ಪದೇಪದೇ ಹೇಳುತ್ತಿದ್ದಾರೆ. ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಹುದ್ದೆಯ ಬೇಡಿಕೆಯನ್ನು ಮುಂದೆ ಮಾಡಿದರೆ ಖರ್ಗೆ ಅವರು ಇಕ್ಕಟ್ಟಿಗೆ ಸಿಲುಕುತ್ತಾರೆ. ರಾಹುಲ್ ಗಾಂಧಿ ಕೂಡ ಒಲ್ಲೆ ಎನ್ನಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ದಲಿತರಿಗೆ ಅವಕಾಶ ನೀಡುವುದಿಲ್ಲ ಎನ್ನುವುದಾದರೆ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ಎಂದು ಕಾಂಗ್ರೆಸ್ ನಾಯಕರು ಹೇಳುವ ಸನ್ನಿವೇಶ ಸೃಷ್ಟಿಸಲು ತಯಾರಿಗಳು ನಡೆಯುತ್ತಿವೆ. ಈ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗೆ ದಲಿತ ನಾಯಕರು ಹೆಗಲು ಕೊಡುತ್ತಿದ್ದಾರೆ.
