Saturday, December 6, 2025
Homeಬೆಂಗಳೂರು500 ಎಕರೆ ಸರ್ಕಾರಿ ಜಮೀನು ಕಬಳಿಸಿದವರ ವಿರುದ್ಧ ಇಡಿಗೆ ಎನ್‌.ಆರ್‌.ರಮೇಶ್‌ ದೂರು

500 ಎಕರೆ ಸರ್ಕಾರಿ ಜಮೀನು ಕಬಳಿಸಿದವರ ವಿರುದ್ಧ ಇಡಿಗೆ ಎನ್‌.ಆರ್‌.ರಮೇಶ್‌ ದೂರು

N.R.Ramesh files complaint with ED against those who grabbed 500 acres of government land

ಬೆಂಗಳೂರು, ಡಿ.4- ತಾವರೆಕೆರೆ ಸಮೀಪದ ನೂರಾರು ಕೋಟಿ ರೂ. ಮೌಲ್ಯದ 500 ಎಕರೆ ಸರ್ಕಾರಿ ಜಮೀನು ಕಬಳಿಸಿರುವವರ ವಿರುದ್ಧ ಬಿಜೆಪಿ ನಾಯಕ ಎನ್‌.ಆರ್‌.ರಮೇಶ್‌ ಅವರು ಜಾರಿ ನಿರ್ದೇಶನಾಲಯ, ಲೋಕಾಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ 1,67,751 ಪುಟಗಳ ದಾಖಲೆ ಸಮೇತ ದೂರು ನೀಡಿ ಗಮನ ಸೆಳೆದಿದ್ದಾರೆ.

ಬಿಬಿಎಂಪಿ ಮಾಜಿ ಉಪಮಹಾಪೌರ ಪುಟ್ಟರಾಜು ಅವರ ಪತ್ನಿ ಮತ್ತಿತರರು ಹಾಗೂ ಈ ಅವ್ಯವಹಾರಕ್ಕೆ ಕುಮಕ್ಕು ನೀಡಿರುವ ಐವರು ಅಧಿಕಾರಿಗಳ ವಿರುದ್ಧ ಅವರು ದೂರು ದಾಖಲಿಸಿದ್ದಾರೆ.

ನೂರಾರು ಕೋಟಿ ರೂ. ಗಳಷ್ಟು ಮಾರುಕಟ್ಟೆ ಮೌಲ್ಯವಿರುವ ಅಮೂಲ್ಯ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿರುವ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಚಂದ್ರೇಗೌಡ ಮತ್ತು ಧರ್ಮಪತ್ನಿ ನಾಗವೇಣಮ್ಮ, ಬಿಬಿಎಂಪಿಯ ನಿಕಟಪೂರ್ವ ಉಪ ಮಹಾಪೌರ ಪುಟ್ಟರಾಜು, ಧರ್ಮಪತ್ನಿ ಮಾಲಾ, ರಾಮಕ್ಕ, ಲಕ್ಷ್ಮಮ್ಮ, ರಮೇಶ್‌‍, ಜಿ. ಲಕ್ಷ್ಮೀಪತಿ, ರಂಗಸ್ವಾಮಯ್ಯ, ರಂಗನಾಥ್‌, ಪ್ರಶಾಂತ್‌, ಪುಟ್ಟಲಕ್ಷ್ಮಿ, ಟಿ. ಎನ್‌‍. ಕೃಷ್ಣಪ್ಪ ಸೇರಿದಂತೆ ಶಾಸಕರೊಬ್ಬರ ಕುಟುಂಬದ ವಿರುದ್ಧವೂ ಅವರು ಇಡಿಯಲ್ಲಿ ದೂರು ದಾಖಲಿಸಿದ್ದಾರೆ.

ಇವರ ಜೊತೆಗೆ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳಾಗಿದ್ದ ರಂಗಪ್ಪ ಮತ್ತು ಸೋಮಶೇಖರ, ಅಪರ ಜಿಲ್ಲಾಧಿಕಾರಿಗಳಾಗಿದ್ದ ಆರತಿ ಆನಂದ್‌‍, ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪ ವಿಭಾಗಾಧಿಕಾರಿಗಳಾಗಿದ್ದ ರಜನೀಕಾಂತ್‌‍, ಅಪೂರ್ವ ಬಿದರಿ ಮತು ರಘುನಂದನ್‌, ತಹಸೀಲ್ದಾರ್‌ ಆಗಿದ್ದ ಶ್ರೀನಿವಾಸ್‌‍, ಉಪ ತಹಸೀಲ್ದಾರ್‌ ಕೆಂಪೇಗೌಡ, ರಾಜಸ್ವ ನಿರೀಕ್ಷಕ ಮೋನಿಷ್‌‍, ಗ್ರಾಮ ಲೆಕ್ಕಿಗರುಗಳಾದ ನಂಜೇಗೌಡ ಮತ್ತು ರವೀಂದ್ರ, ನವೀನ್‌‍, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಸೀಲ್ದಾರ್‌ ಕಚೇರಿಯ ಮಂಜುನಾಥ್‌ ಅಲಿಯಾಸ್‌‍ ವಾಲೇ ಮಂಜು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕ ಪ್ರಶಾಂತ್‌ ಗೌಡ ಪಾಟೀಲ್‌ ಅವರುಗಳ ವಿರುದ್ಧವೂ ಸಹ ದೂರು ದಾಖಲು ಮಾಡಿದ್ದಾರೆ.

ಇದರ ಜೊತೆಗೆ ಕೋಟ್ಯಂತರ ರೂ. ಅವ್ಯವಹಾರದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭೂಗಳ್ಳರ ಪಾಲಾಗಿರುವ ಸರ್ಕಾರಿ ಸ್ವತ್ತನ್ನು ಸರ್ಕಾರ ವಶಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ ಆಗ್ರಹಿಸಿದ್ದಾರೆ.

ಈ ಹಗರಣದಲ್ಲಿ 2006 ರಿಂದೀಚೆಗೆ ಮಾಡಿರುವ ಎಲ್ಲಾ ದಾಖಲೆಗಳು ಸಂಪೂರ್ಣವಾಗಿ ನಕಲಿ ದಾಖಲೆಗಳೇ ಆಗಿವೆ. ಬಹುತೇಕ ಮಾಗಡಿ ಕ್ಷೇತ್ರದಿಂದ ಬಂದಿರುವ ಜನರ ಹೆಸರುಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹೆಸರಿನಲ್ಲಿ ಮಾರಾಟ ಮಾಡಲಾಗಿದೆ. ರಾಮಸ್ವಾಮಿ ಆಯೋಗ ನೀಡಿರುವ ನಕ್ಷೆಗಳಿಗೂ ಮತ್ತು ಈಗ ಸೃಷ್ಟಿಸಲಾಗಿರುವ ನಕ್ಷೆಗಳಿಗೂ ತಾಳೆಯೇ ಆಗುತ್ತಿಲ್ಲ ಎನ್ನುವುದಕ್ಕೆ ರಮೇಶ್‌ ಅವರು ಸಂಪೂರ್ಣ ದಾಖಲೆಗಳನ್ನು ಒದಗಿಸಿದ್ದಾರೆ.

ಪ್ರಸ್ತುತ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಗ್ರಾಮಗಳು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ಈ ಭಾಗದ ಸ್ವತ್ತುಗಳಿಗೆ ಮೊದಲಿಗಿಂತಲೂ ದುಪ್ಪಟ್ಟು ಮಾರುಕಟ್ಟೆ ಮೌಲ್ಯ ಸೃಷ್ಟಿಯಾಗಿರುತ್ತದೆ. ಇದರಿಂದಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಸುಮಾರು 12,000 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ 500 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ಅತ್ಯಮೂಲ್ಯ ಸರ್ಕಾರಿ ಸ್ವತ್ತುಗಳನ್ನು ಭ್ರಷ್ಟ ಅಧಿಕಾರಿಗಳ ನೆರವಿನಿಂದ ಪ್ರಭಾವೀ ಸರ್ಕಾರೀ ನೆಲಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಇದನ್ನು ತಪ್ಪಿಸದಿದ್ದರೆ ಸಾವಿರಾರು ಕೋಟಿ ರೂ.ಮೌಲ್ಯದ ಮತ್ತಷ್ಟು ಸರ್ಕಾರಿ ಆಸ್ತಿಗಳು ಭೂಗಳ್ಳರ ಪಾಲಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

RELATED ARTICLES

Latest News