ಮೈಸೂರು, ಮೇ 9- ಹಣದಾಸೆಗೆ ವೃದ್ಧೆಯನ್ನು ಕೊಲೆ ಮಾಡಿ ಶೌಚಾಲಯದ ಗುಂಡಿಯಲ್ಲಿ ಶವ ಹೂತು ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ತಿಪ್ಪೂರು ಗ್ರಾಮದ ನಿವಾಸಿ ಗೌರಮ (90) ಕೊಲೆಯಾದ ವೃದ್ಧೆ.
ಗೌರಮ ಜೊತೆ ಆತೀಯವಾಗಿ ನಡೆದುಕೊಳ್ಳುತ್ತಿದ್ದ ಆರೋಪಿ ವೀರಭದ್ರ ಸಣ್ಣಪುಟ್ಟ ಕೆಲಸದಲ್ಲಿ ಅವರಿಗೆ ಸಹಾಯ ಮಾಡಿ ವಿಶ್ವಾಸಗಳಿಸಿಕೊಂಡಿದ್ದ. 15 ದಿನಗಳ ಹಿಂದೆ ಬ್ಯಾಂಕ್ ನಲ್ಲಿ 75 ಸಾವಿರ ಹಣ ಡ್ರಾ ಮಾಡಿಕೊಟ್ಟಿದ್ದ ವೀರಭದ್ರ ಎರಡು ದಿನದಲ್ಲಿ ಹಣ ವಾಪಸ್ ನೀಡುತ್ತೇನೆ ಎಂದು ಹಣ ಪಡೆದಿದ್ದ.
ಒಂದು ವಾರದ ಬಳಿಕ ಗೌರಮ ಹಣ ಕೇಳಿದಾಗ ಆತ ಸತಾಯಿಸಿದ್ದಾನೆ. ತದ ನಂತರದಲ್ಲಿ ಒಬ್ಬರೇ ಇರುವ ಸಮಯ ನೋಡಿಕೊಂಡು ಮನೆಗೆ ಹೋಗಿ ವೃದ್ಧೆಯನ್ನು ಉಸಿರುಗಟ್ಟಿಸಿ ಸಾಯಿಸಿ ಶವವನ್ನು ಯುಜಿಡಿ ಗುಂಡಿಗೆ ಹಾಕಿ ಪರಾರಿಯಾಗಿದ್ದ.
15 ದಿನಗಳಿಂದಲೂ ಗೌರಮ ಕಾಣದಿದ್ದಾಗ ಪೊಲೀಸ್ ಠಾಣೆಗೆ ಮಕ್ಕಳು ದೂರು ನೀಡಿದ್ದಾರೆ. ಈ ನಡುವೆ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ವೀರಭದ್ರ ಕೂಡ ಕಾಣೆಯಾಗಿದ್ದ ಹಿನ್ನಲೆಯಲ್ಲಿ ಪೊಲೀಸರಿಗೆ ಅನುಮಾನ ಬಂದು ಬಳಿಕ ವೀರಭದ್ರನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದಾನೆ.
ಗೌರಮರ ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
