ಬೆಂಗಳೂರು,ಡಿ.4- ರಾಜಗೋಪಾಲನಗರ ಘಟನೆ ಮಾಸುವ ಮುನ್ನವೇ ನಗರದಲ್ಲಿ ಪತ್ನಿಯನ್ನು ಕೊಂದು ಪತಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕೇಗೌಡನಪಾಳ್ಯದ ಚಿಕ್ಕ ಅಪಾರ್ಟ್ಮೆಂಟ್ನ 2ನೇ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಿಎಂಟಿಸಿ ನಿವೃತ್ತ ಚಾಲಕ ವೆಂಕಟೇಶನ್ (65) ಎಂಬುವವರೇ ಪತ್ನಿ ಬೇಬಿ (60) ಯನ್ನು ಕೊಂದು ಆತಹತ್ಯೆ ಮಾಡಿಕೊಂಡವರು.
ವೆಂಕಟೇಶನ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗಳಿಗೆ ಮದುವೆಯಾಗಿದೆ. ಮಗನಿಗೂ ಮದುವೆಯಾಗಿದ್ದು ಒಂದು ಮಗುವಿದೆ.ಮಗ ಚಾಲಕ ವೃತ್ತಿ ಮಾಡುತ್ತಿದ್ದರೆ, ಸೊಸೆ ಅಡುಗೆ ಕೆಲಸಕ್ಕೆ ಹೋಗುತ್ತಿದ್ದಾರೆ.ವೆಂಕಟೇಶನ್ ಅವರ ಪತ್ನಿ ಬೇಬಿ ಅವರು ಆರು ತಿಂಗಳಿನಿಂದ ಪಾರ್ಶ್ವವಾಯು ಪೀಡಿತರಾಗಿದ್ದು, ವೀಲ್ ಚೇರ್ನಲ್ಲೇ ಇರುತ್ತಿದ್ದರು.ಆಗಾಗ್ಗೆ ನಿನ್ನನ್ನು ಕೊಂದು ನಾನು ಸಾಯುತ್ತೀನಿ ಎಂದು ಪತ್ನಿಗೆ ವೆಂಕಟೇಶನ್ ಹೇಳುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದ ಮಗ-ಸೊಸೆ ಅವರನ್ನು ಸಮಾಧಾನ ಪಡಿಸುತ್ತಿದ್ದರು.
ಪ್ರತಿನಿತ್ಯ ವೆಂಕಟೇಶನ್ ಅವರು ಮೊಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ ಮಂಗಳವಾರ ದಂಪತಿ ನಡುವೆ ಯಾವ ವಿಷಯಕ್ಕೆ ಮನಸ್ತಾಪವಾಗಿ ಜಗಳವಾಯಿತೋ ಗೊತ್ತಿಲ್ಲ.
ಮಗ-ಸೊಸೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾಗ ಸೊಸೆಗೆ ಕರೆ ಮಾಡಿ ಮೊಮಗನನ್ನು ಕರೆತರಲು ನನಗೆ ಆಗುವುದಿಲ್ಲ, ನೀನೇ ಕರೆದುಕೊಂಡು ಬಾ ಎಂದು ವೆಂಕಟೇಶನ್ ಹೇಳಿದ್ದಾರೆ. ನಂತರ ಬಟ್ಟೆ ಒಣ ಹಾಕುವ ವೈರ್ ಬಿಚ್ಚಿಕೊಂಡು ವೀಲ್ಚೇರ್ನಲ್ಲಿದ್ದ ಪತ್ನಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ ವೆಂಕಟೇಶನ್ ನಂತರ ಅದೇ ವೈರ್ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.
ಸೊಸೆ ಶಾಲೆಯಿಂದ ಮಗನನ್ನು ಮನೆಗೆ ಕರೆದುಕೊಂಡು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಅವರು ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಬಂದು ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಬ್ರಮಣ್ಯಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ದಂಪತಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಎರಡು ದಿನಗಳ ಹಿಂದೆಯಷ್ಟೇ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಿವಿಂಗ್-ಟು-ಗೆದರ್ನಲ್ಲಿದ್ದ ಸಂಗಾತಿಯನ್ನು ಕೊಲೆ ಮಾಡಿ ಪ್ರಿಯಕರನೂ ಆತಹತ್ಯೆ ಮಾಡಿಕೊಂಡಿರುವ ಘಟನೆ ಮಾಸುವ ಮುನ್ನವೇ ಇಂತಹದೇ ಘಟನೆ ನಗರದಲ್ಲಿ ನಡೆದಿರುವುದು ವಿಪರ್ಯಾಸ.
