ಬೆಂಗಳೂರು,ಡಿ.30-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಪ್ರಧಾನಿಯಾಗಬೇಕೆಂದು ಬೇರೆ ರಾಜ್ಯದ ಮುಖ್ಯಮಂತ್ರಿಗಳು ಬಯಸುತ್ತಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮತ್ತೊಬ್ಬ ಕನ್ನಡಿಗರೊಬ್ಬರು ಪ್ರಧಾನಿಯಾಗಲಿ ಎಂದು ಸಿದ್ದರಾಮಯ್ಯ ಹೇಳಲಿಲ್ಲ. ಒಂದು ವೇಳೆ ಆ ವಿಚಾರ ಪ್ರಸ್ತಾಪ ಮಾಡದೆ ತಟಸ್ಥವಾಗಿದ್ದರೆ ಆಗುತ್ತಿತ್ತು. ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಅವರ ಮನಸ್ಥಿತಿ ಎಂಥದ್ದು ಎಂಬುದನ್ನು ತಿಳಿಸುತ್ತದೆ. ದಲಿತ ಸಮುದಾಯಗಳು ಇದರ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ಹಿಂದೆ ಮೈತ್ರಿ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರೇ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದರು. ಆದರೂ ಕಾಂಗ್ರೆಸ್ ಪಕ್ಷದ ನಾಯಕರು ಅವಕಾಶ ಮಾಡಿಕೊಡಲಿಲ್ಲ. ನಾವು ಎನ್‍ಡಿಎ ಮೈತ್ರಿಕೂಟದಲ್ಲಿದ್ದರೂ ಖರ್ಗೆಯವರು ಪ್ರಧಾನಿಯಾದರೆ ಒಳ್ಳೆಯದು ಎಂಬ ಮನೋಭಾವನೆ ಇದೆ. ಆದರೆ ಪ್ರಧಾನಿಯಾಗುವುದು ಬಿಡುವುದು ಬೇರೆ ವಿಚಾರ. ಖರ್ಗೆಯವರು ಪ್ರಧಾನಿಯಾಗುವ ಸನ್ನಿವೇಶವೂ ಇಲ್ಲ.
ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ
ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ದಲಿತ ಸಮುದಾಯಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದವು. ಅಧಿಕಾರಕ್ಕೆ ಬಂದ ಮೇಲೆ ಅಹಿಂದ ನಾಯಕರಾದ ಸಿದ್ದರಾಮಯ್ಯನವರ ಹಿಂದೆ ಅಹಿಂದ ಎಂಬಂತಾಗಿದೆ ಎಂದು ಟೀಕಿಸಿದರು. ಅಧಿಕಾರಕ್ಕೆ ಬಂದ ನಂತರ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ ಸುಂಕ, ವಿದ್ಯುತ್ ದರ ಹೆಚ್ಚಳ ಮಾಡಿ ಜನರಿಗೆ ಹೊರೆ ಹೊರಿಸಿದ್ದಾರೆ. ಅಲ್ಲದೆ ಮತ್ತೆ ಪ್ರತಿ ಯೂನಿಟ್‍ಗೆ 48 ಪೈಸೆ ವಿದ್ಯುತ್ ಹೆಚ್ಚಳ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ ಗೆಲುವು ಸಾಧಿಸಬೇಕೆಂಬುದು ನಮ್ಮ ಗುರಿಯಾಗಿದೆ ಎಂದ ಅವರು, ಪಠ್ಯ ಪುಸ್ತಕ ಮುದ್ರಣಕ್ಕೆ ಸಂಬಂಧಿಸಿದಂತೆಯೂ ಆರೋಪಗಳು ಕೇಳಿಬಂದಿವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ರಮೇಶ್‍ಗೌಡ ಉಪಸ್ಥಿತರಿದ್ದರು.