ಬೆಂಗಳೂರು,ಡಿ.4-ಉತ್ತರ ವಿಭಾಗದ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಸೇರಿದಂತೆ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 18.60 ಕೋಟಿ ಮೌಲ್ಯದ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿ ದ್ದಾರೆ.
ಇಲ್ಲಿನ ರಾಣಿ ಅಬ್ಬಕ್ಕ ಆಟದ ಮೈದಾನದ ಹತ್ತಿರ ಇಬ್ಬರು ಮಾದಕ ವಸ್ತುವನ್ನು ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ, 18 ಕೆಜಿ 590 ಗ್ರಾಂ ಹೈಡ್ರೋ ಗಾಂಜಾ, 2 ಮೊಬೈಲ್, ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ಮಂಜು ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದ್ದು, ತನಿಖೆ ಮುಂದುವರೆದಿದೆ.
ಆರ್ಎಂಸಿಯಾರ್ಡ್:
ಲಾರಿ ಚಾಲಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಆರ್ಎಂಸಿಯಾರ್ಡ್ ಠಾಣೆ ಪೊಲೀಸರು ಬಂಧಿಸಿ, 8.35 ಲಕ್ಷ ಮೌಲ್ಯದ 8 ಕೆಜಿ 350 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಅಪರಿಚಿತರಿಂದ ಖರೀದಿಸಿ ನಗರಕ್ಕೆ ತಂದು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಲಾರಿ ಸ್ಟ್ಯಾಂಡ್ನಲ್ಲಿ ಮಾರಾಟ ಮಾಡುತ್ತಿದ್ದುದ್ದಾಗಿ ಆರೋಪಿಗಳು ಹೇಳಿದ್ದಾರೆ.ಇನ್ಸ್ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ತಂಡ ಪ್ರಕರಣ ವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಆರ್ಟಿನಗರ:
ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಮಂದಿಯನ್ನು ಆರ್ಟಿನಗರ ಠಾಣೆ ಪೊಲೀಸರು ಬಂಧಿಸಿ, 5.43 ಲಕ್ಷ ಮೌಲ್ಯದ 5 ಕೆಜಿ 437 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ದಿನ್ನೂರು ಮುಖ್ಯ ರಸ್ತೆಯ ಸುಲ್ತಾನ್ಪಾಳ್ಯದ ಪಾನಿಪುರಿ ಮೈದಾನದಲ್ಲಿ ಐದು ಮಂದಿ ಸೇರಿಕೊಂಡು ಬ್ಯಾಗ್ಗಳಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡು ತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಚಿತ್ತರಂಜನ್ ಅವರು ಸಿಬ್ಬಂದಿಯೊಂದಿಗೆ ಸ್ಥಳದ ಮೇಲೆ ದಾಳಿ ಮಾಡಿ ಐದು ಮಂದಿಯನ್ನು ಬಂಧಿಸಿ, 2 ಬ್ಯಾಗ್ಗಳಲಿದ್ದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಜೆಸಿನಗರ:
ವಿದೇಶಿ ಪ್ರಜೆ ಬಂಧನ ಕೆನರಾ ಬ್ಯಾಂಕ್ ಬಳಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜೆಸಿನಗರ ಠಾಣೆ ಪೊಲೀಸರು ದಾಳಿ ಮಾಡಿ ವಿದೇಶಿ ಪ್ರಜೆಯನ್ನು ಬಂಧಿಸಿ, 1500 ರೂ. ನಗದು ಸೇರಿದಂತೆ 1.35 ಲಕ್ಷ ಮೌಲ್ಯದ 21 ಗ್ರಾಂ ಎಂಡಿಎಂಎ, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಈ ವಿದೇಶಿ ಪ್ರಜೆ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಗಿರಾಕಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದುದ್ದು ಇನ್ಸ್ಪೆಕ್ಟರ್ ಚೈತನ್ಯ ಹಾಗೂ ಸಿಬ್ಬಂದಿ ತಂಡ ಪತ್ತೆ ಹಚ್ಚಿದೆ.
ಮಲ್ಲೇಶ್ವರಂ:
ರೈಲ್ವೆ ಬ್ರಿಡ್ಜ್ ನ ಮೆಟ್ಟಿಲುಗಳ ಮೇಲೆ ಮಾದಕ ವಸ್ತು ಮಾರಾಟಮಾಡುತ್ತಿದ್ದ ಆರೋಪಿಯೊಬ್ಬನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿ, 77,600 ರೂ. ಮೌಲ್ಯದ 772 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಆರೋಪಿಯು ಕಡಿಮೆ ಬೆಲೆಗೆ ಅಪರಿಚಿತನಿಂದ ಗಾಂಜಾ ಖರೀದಿಸಿ ವಿದ್ಯಾರ್ಥಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದನು. ಈ ಕಾರ್ಯಾಚರಣೆಯನ್ನು ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಂಡ ಕೈಗೊಂಡು ವಿದೇಶಿ ಪ್ರಜೆಯನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂತು ಹೈಡ್ರೋ ಗಾಂಜಾ
ಇದೇ ಪ್ರಥಮ ಬಾರಿಗೆ ನಗರ ಪೊಲೀಸರು 18.60 ಕೋಟಿ ಮೌಲ್ಯದ ಹೈಡ್ರೋ ಗಾಂಜಾವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಿದೇಶಿ ಅಂಚೆ ಕಚೇರಿಗೆ ಕೊರಿಯರ್ನಲ್ಲಿ ಬಂದಿದ್ದ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಏರ್ಪೋರ್ಟ್ ಮೂಲಕ ಕೊರಿಯರ್ನಲ್ಲಿ ಬಂದಿರುವ ಇಷ್ಟೊಂದು ಪ್ರಮಾಣದ ಹೈಡ್ರೋ ಗಾಂಜಾವನ್ನು ಪತ್ತೆಹಚ್ಚಿ ಮಹಿಳೆ ಸೇರಿ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಹೈಡ್ರೋ ಗಾಂಜಾ ಬ್ಯಾಂಕಾಕ್ನಿಂದ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಹಲವರು ಶಾಮಿಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಶೀಘ್ರದಲ್ಲಿ ಬಂಧಿಸುವುದಾಗಿ ಹೇಳಿದರು.ಮಾದಕ ವಸ್ತು ಹೈಡ್ರೋ ಗಾಂಜಾವನ್ನು ಅನುಮಾನ ಬಾರದ ರೀತಿ ಕವರ್ ಮಾಡಿ ಪ್ಯಾಕಿಂಗ್ ಮಾಡಲಾಗಿತ್ತು. ಎಂದು ಅವರು ಮಾಹಿತಿ ನೀಡಿದರು.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ 2.29 ಕೆಜಿ ಹೈಬ್ರಿಡ್ ಗಾಂಜಾ ವಶ
-ಇಲ್ಲಿನ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಪ್ರಯಾಣಿಕನನ್ನು ಬಂಧಿಸಿ 2.29 ಕೆಜಿ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಬಿಜು ಫೆಬಿನ್ ಎಂದು ಗುರುತಿಸಲಾಗಿದೆ.ಚೆನ್ನೈನಿಂದ ದೇಶೀಯ ವಿಮಾನದಲ್ಲಿ ಬೆಳಗಿನ ಜಾವ 1.35 ರ ಸುಮಾರಿಗೆ ಈತ ಇಲ್ಲಿಗೆ ಆಗಮಿಸಿದ್ದ ಎಂದು ಡಿಆರ್ಐ ಮೂಲಗಳು ತಿಳಿಸಿವೆ.
ಶಂಕಿತ ಹೈಬ್ರಿಡ್ ಗಾಂಜಾದ ಮೌಲ್ಯ ಸುಮಾರು 2 ಕೋಟಿ ರೂ.ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಫೆಬಿನ್ ಹೈಬ್ರಿಡ್ ಗಾಂಜಾವನ್ನು ಖರೀದಿಸಲು ಈತ ವಿಶಾಖಪಟ್ಟಣಕ್ಕೆ ತೆರಳಿ ವಾಪಸ್ವಿಶಾಖಪಟ್ಟಣದಿಂದ ಚೆನ್ನೈಗೆ ಬಂದು ಅಲ್ಲಿಂದ ಕೊಚ್ಚಿಗೆ ಮತ್ತೊಂದು ವಿಮಾನ ಹತ್ತಿದರು ಎಂದು ತನಿಖೆ ವೇಳೆ ಗೊತ್ತಾಗಿದೆ.
ಖಚಿತ ಸುಳಿವಿನ ನಂತರ, ಡಿಆರ್ಐ ಅಧಿಕಾರಿಗಳು ಆರೋಪಿ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿದ್ದಾಗ ಅವರನ್ನು ತಡೆದು ಅವರ ಸಾಮಾನುಗಳನ್ನು ಪರಿಶೀಲಿಸಿದಾಗ, ತಲಾ 574 ಗ್ರಾಂ ತೂಕದ ನಾಲ್ಕು ಪ್ಯಾಕೆಟ್ಗಳು ಪತ್ತೆಯಾಗಿದೆ. ಒಟ್ಟು 2.29 ಕೆಜಿ.ಗಾಂಜಾ ಸಿಕ್ಕಿದ್ದು ಇದರ ಮೂಲವನ್ನು ಪತ್ತೆಹಚ್ಚಲು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಡಿಆರ್ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು, ವಿಚಾರಣೆಗಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ
