ಬೆಂಗಳೂರು, ಮೇ 16- ಬಹುಕೋಟಿ ವಂಚನೆ ಹಗರಣದಲ್ಲಿ ಶಿವಂ ಅಸೋಸಿಯೇಟ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ನೀಲಣ್ಣನವರ್ ರನ್ನು ವಿಚಾರಣೆಗೊಳಪಡಿಸಿ, ಇಂದಿನಿಂದ ಆಸ್ತಿ ಹಾಗೂ ದಸ್ತಾ ವೇಜುಗಳ ಜಪ್ತಿ ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಳೆದ ಎರಡು ದಿನಗಳಿಂದ ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ್, ಸಹಕಾರ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಜಂಟಿಯಾಗಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ ಶಿವಾನಂದ ನೀಲಣ್ಣನವರ್ 35 ಸಾವಿರ ಜನರಿಂದ ವಾರ್ಷಿಕ ಶೇ. 36 ರಷ್ಟು ಬಡ್ಡಿ ನೀಡುವ ಆಮಿಷವೊಡ್ಡಿ ಸುಮಾರು 4,500 ಕೋಟಿ ರೂ.ಗಳನ್ನು ವಸೂಲಿ ಮಾಡಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.2020ರಲ್ಲಿ ಶಿವಂ ಅಸೋಸಿಯೇಟ್್ಸ ನೋಂದಣಿಯಾಗಿದ್ದು ಆಕ್ಯೂಮೆನ್ ಆಪ್ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
ಕೈ ಸಾಲದ ಕರಾರಿನ ಮೂಲಕ ಜನರಿಂದ ಹಣ ಪಡೆಯಲಾಗಿದೆ. ಅದನ್ನು ಎಲ್ಲಿ ಯಾವ ಉದ್ದೇಶಕ್ಕೆ ಬಳಸಲಾಗಿದೆ. ಬ್ಯಾಂಕ್ ವಹಿವಾಟು ಮತ್ತು ನಗದು ರೂಪದಲ್ಲಿ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬೆಲ್ಲಾ ಮಾಹಿತಿಗಳನ್ನು ಪರಿಶೀಲಿಸುವುದಾಗಿ ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಶಿವಂ ಅಸೋಸಿಯೇಟ್ಸ್ ಕ್ರಮಬದ್ಧವಲ್ಲದ ಹಣಕಾಸಿನ ವಹಿವಾಟು ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಆರ್ಬಿಐ ಮತ್ತು ಸೇಬಿ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಹಕಾರ ಇಲಾಖೆಯ ಉಪ ನಿಬಂಧಕರು ನೀಡಿರುವ ದೂರಿನ ಮೇರೆಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಾಥಮಿಕ ವಿಚಾರಣೆಯ ಬಳಿಕ ಪೊಲೀಸರು ಶಿವಾನಂದ ನೀಲಣ್ಣನವರನ್ನು ಬಂಧಿಸಿದ್ದಾರೆ ಎಂದು ಉಪ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಮಾತನಾಡಿ, ಆರೋಪಿ ಶಿವಾನಂದ ನೀಲಣ್ಣನವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆತ ನೀಡುವ ಹೇಳಿಕೆಗಳು ಹಾಗೂ ಮಾಹಿತಿಗಳನ್ನು ಆಧರಿಸಿ ಜಪ್ತಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಪ್ರಾಥಮಿಕವಾಗಿ 35 ಸಾವಿರ ಮಂದಿ ಶಿವಂ ಅಸೋಸಿಯೇಟ್ಸ್ ನಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಹಿನ್ನೆಲೆ:
ಶಿವಾನಂದ ನೀಲಣ್ಣನವರ್ ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ ಭಾರೀ ವೈರಲ್ ಆಗಿತ್ತು. ಚಿಟಿಕೆ ಹೊಡೆಯುವಷ್ಟರಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ, ಅದು ನನಗೆ ದೊಡ್ಡ ವಿಷಯವೇ ಅಲ್ಲ, 224 ಕ್ಷೇತ್ರಗಳಲ್ಲೂ ನನ್ನ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ತಮಗಿದೆ, 15 ಸಾವಿರ ಬಂದೂಕುಗಳನ್ನು ನಾನು ಹೊಂದಿದ್ದೇನೆ, ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ್ದೇನೆ ಎಂದು ಬಹಿರಂಗವಾಗಿ ವೇದಿಕೆಯಲ್ಲಿ ಶಿವಾನಂದ ಹೇಳಿದ್ದರು.
ಮಾರುಕಟ್ಟೆ ಗುಪ್ತಚರ ಮಾಹಿತಿ ಆಧರಿಸಿ ಶಂಕಾಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ ತನಿಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಅದರಂತೆ ನಿನ್ನೆ ಕಾರ್ಯಾಚರಣೆ ನಡೆದಿತ್ತು. 2020ರಿಂದಲೂ ಶಿವಂ ಅಸೋಸಿಯೇಟ್ಸ್ ಜನರಿಂದ ನಿಯಮ ಉಲ್ಲಂಘಿಸಿ ಹಣ ವಸೂಲಿ ಮಾಡುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದವರಂತೆ ಇದ್ದಿದ್ದು ಏಕೆ? ಎಂಬ ಪ್ರಶ್ನೆ ಉದ್ಭವಿಸಿದೆ. ಈಗ ಏಕಾಏಕಿ ಕಾರ್ಯಾಚರಣೆ ನಡೆಸಲಾಗಿದೆ. ಬಂಡವಾಳ ಹೂಡಿಕೆ ಮಾಡಿದ ಸಾವಿರಾರು ಜನ ಏಕಾಏಕಿ ಆಘಾತಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾರೀತ ಶಿವಾನಂದ ನೀಲಣ್ಣವರ್
ಬೆಂಗಳೂರು,ಮೇ 16- ಹಣ ವಂಚನೆ ಆರೋಪದಡಿ ಪೊಲೀಸರು ವಶದಲ್ಲಿರುವ ಶಿವಾನಂದ ನೀಲಣ್ಣವರ್ ಮೂಲತಃ ಹುಬ್ಬಳ್ಳಿಯವ. ಹುಬ್ಬಳ್ಳಿ ತಾಲ್ಲೂಕಿನ ಉಣಕಲ್ ಗ್ರಾಮದಲ್ಲಿ ಆತ ಜನಿಸಿದ್ದು, ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಕೆಇಬಿನಲ್ಲಿ ಕೆಲಸ ಮಾಡುತ್ತಿರುವಾಗಲೇ ಸಾವನ್ನಪ್ಪಿದ್ದರಿಂದ ತಂದೆಯ ಕೆಲಸ ಆತನ ಸಹೋದರನಿಗೆ ಲಭಿಸಿದ್ದರಿಂದ ಇಡೀ ಕುಟುಂಬ ಬೆಳಗಾವಿಗೆೆ ಬಂದು ನೆಲೆಸಿದೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಆತ ರೂರಲ್ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿ ನಂತರ ಆಟೋದಲ್ಲಿ ಐಸ್ಕ್ರೀಂ ಮಾರುತ್ತಿದ್ದ. ಕೊನೆಗೆ ಆತನೇ ಐಸ್ಕ್ರೀಂ ಫ್ಯಾಕ್ಟರಿ ಕೂಡಾ ತೆರೆದಿದ್ದರು. 2012 ರಿಂದ ಸ್ಟಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿ 15 ಲಕ್ಷ ಕಳೆದುಕೊಂಡಿದ್ದಾನೆ. ಸ್ಟಾಕ್ ಮಾರ್ಕೆಟ್ನ ಆರ್ಥಿಕ ವಹಿವಾಟು ಗಮನಿಸಿ ಸ್ವತಃ ಒಂದು ಅಕ್ಯೂಮೆನ್ ಎಂಬ ಆ್ಯಪ್ ಪ್ರಾರಂಭಿಸಿ ಸಾವಿರಾರು ಕೋಟಿ ಹಣ ಸಂಪಾದಿಸಿದ್ದಾರೆ.
ಇಲ್ಲಿಂದ ಆತನ ಅದೃಷ್ಟ ಕುಲಾಯಿಸಿದೆ. ಹಲವು ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾನೆ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ. ಅಲ್ಲದೇ ಪುಣೆ, ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದ ಶಿವಾನಂದ ನೀಲಣ್ಣವರ್ ತಮ ಅತಿರೇಕದ ಮಾತಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗಿ ಇದೀಗ ರೇಡ್ ಆಗಿದ್ದಾರೆ.
ಹಣ ವಂಚನೆ ಆರೋಪದಡಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ನೀಲಣ್ಣವರ್ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
