Sunday, September 8, 2024
Homeಬೆಂಗಳೂರುಕೊಲೆಯಲ್ಲಿ ಕೊನೆಯಾದ 'ಪ್ರೀತಿ' : ಕೃತಿಕುಮಾರಿಯನ್ನು ಅಭಿಷೇಕ್‌ ಕೊಂದಿದ್ದೇಕೆ..?

ಕೊಲೆಯಲ್ಲಿ ಕೊನೆಯಾದ ‘ಪ್ರೀತಿ’ : ಕೃತಿಕುಮಾರಿಯನ್ನು ಅಭಿಷೇಕ್‌ ಕೊಂದಿದ್ದೇಕೆ..?

ಬೆಂಗಳೂರು,ಜು.27- ಪಿಜಿಗೆ ನುಗ್ಗಿ ಯುವತಿಯ ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಕೃತಿಕುಮಾರಿಯ ಸ್ನೇಹಿತೆ ಹಾಗೂ ಆರೋಪಿ ಭೂಪಾಲ್‌ ಮೂಲದ ಅಭಿಷೇಕ್‌ ಪರಸ್ಪರ ಪ್ರೀತಿಸುತ್ತಿದ್ದರು.
ಖಾಸಗಿ ಕಂಪನಿಯೊಂದರಲ್ಲಿ ಕೃತಿಕುಮಾರಿ ಹಾಗೂ ಸ್ನೇಹಿತೆ ಉದ್ಯೋಗಿಯಾಗಿದ್ದರು. ಇವರಿಬ್ಬರೂ ಒಂದೇ ಪಿಜಿಯಲ್ಲಿ ನೆಲೆಸಿದ್ದರು. ಈ ಪಿಜಿಗೆ ಅಭಿಷೇಕ್‌ ಆಗಾಗ ಬಂದು ಹೋಗುತ್ತಿದ್ದನು.

ಅಭಿಷೇಕ್‌ ಭೂಪಾಲ್‌ನಲ್ಲಿ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ ಎಂಬುದು ಆತನ ಪ್ರೇಯಸಿಗೆ ಗೊತ್ತಾಗಿದೆ. ಯಾವುದಾದರೂ ಕೆಲಸಕ್ಕೆ ಸೇರುವಂತೆ ಅಭಿಷೇಕ್‌ಗೆ ಆಗಾಗ್ಗೆ ಹೇಳುತ್ತಿದ್ದರಿಂದ ಬಲವಂತಕ್ಕೆ ಕೆಲಸಕ್ಕೆ ಸೇರಿದ್ದಾಗಿ ಹೇಳಿದ್ದನು.

ಆದರೆ ಇದು ಸುಳ್ಳು ಎಂಬುದನ್ನು ಅರಿತ ಪ್ರೇಯಸಿ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರಿಂದ ಕೋಪಗೊಂಡು ಆತ ಪಿಜಿ ಬಳಿ ಹೋಗಿ ಗಲಾಟೆ ಮಾಡಿದ್ದಾನೆ.ಅಷ್ಟೇ ಅಲ್ಲದೆ ನಗರದಲ್ಲಿ ಬಾಡಿಗೆಗೆ ಮನೆ ಮಾಡಿ ಪ್ರೇಯಸಿಯನ್ನು ತನ್ನ ಜೊತೆಯಲ್ಲೇ ಇರಿಸಿಕೊಂಡಿದ್ದನು. ಇದು ಪ್ರೇಯಸಿಗೆ ಇಷ್ಟವಿರಲಿಲ್ಲ. ತನ್ನನ್ನು ಪಿಜಿಗೆ ಕರೆದೊಯ್ಯುವಂತೆ ಸ್ನೇಹಿತೆ ಕೃತಿಕುಮಾರಿಗೆ ಒತ್ತಾಯಿಸಿದ್ದಳು.

ಸ್ನೇಹಿತೆಯ ನೆರವಿಗೆ ಧಾವಿಸಿದ ಕೃತಿಕುಮಾರಿ ತನ್ನ ಸ್ನೇಹಿತರೊಂದಿಗೆ ತೆರಳಿ ಅಭಿಷೇಕ್‌ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು ಆಕೆಯನ್ನು ಪಿಜಿಗೆ ಕರೆತಂದಿದ್ದಾರೆ.ಹೊರಗೆ ಹೋಗಿದ್ದ ಅಭಿಷೇಕ್‌ ಮನೆಗೆ ಬಂದಾಗ ಪ್ರೇಯಸಿ ಇಲ್ಲದಿರುವುದು ತಿಳಿದು ಕೃತಿಕುಮಾರಿಯೇ ಕರೆದುಕೊಂಡು ಹೋಗಿದ್ದಾಳೆಂದು ಕೋಪಗೊಂಡಿದ್ದಾನೆ.

ಕಳೆದ ಮಂಗಳವಾರ (ಜು.23) ದಂದು ರಾತ್ರಿ 11.30ರ ಸುಮಾರಿಗೆ ಕೃತಿಕುಮಾರಿ ತಂಗಿದ್ದ ಪಿಜಿ ಬಳಿ ಹೋಗಿ ಮಾಲೀಕರು ಹಾಗೂ ಸೆಕ್ಯೂರಿಟಿಗಾರ್ಡ್‌ ಕಣ್ತಪ್ಪಿಸಿ ಒಳನುಗ್ಗಿ ಸೀದಾ ಮೂರನೆ ಮಹಡಿಗೆ ತೆರಳಿ ರೂಮಿನ ಬಾಗಿಲು ತಟ್ಟಿದ್ದಾನೆ.ಸ್ನೇಹಿತೆ ಬಂದಿರಬಹುದೆಂದು ಕೃತಿಕುಮಾರಿ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಅಭಿಷೇಕ್‌ ಚಾಕುವಿನಿಂದ ಮನಬಂದಂತೆ ಹೊಟ್ಟೆ, ಎದೆ, ಇನ್ನಿತರ ಭಾಗಗಳಿಗೆ ಇರಿದು ಕೊಲೆ ಮಾಡಿ ಭೋಪಾಲ್‌ಗೆ ಪರಾರಿಯಾಗಿದ್ದನು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ಒಂದು ತಂಡ ಭೂಪಾಲ್‌ಗೆ ತೆರಳಿ ಕಾರ್ಯಾಚರಣೆ ಕೈಗೊಂಡು ಆರೋಪಿ ಅಭಿಷೇಕ್‌ನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ.

RELATED ARTICLES

Latest News