ದಾವಣಗೆರೆ,ಡಿ.8– ಜಾಗಕ್ಕಾಗಿ ಎರಡು ಊರುಗಳ ನಡುವೆ ಜಗಳ ಆಗುವುದು ಸಾಮಾನ್ಯ. ಆದರೆ ಎರಡು ಊರುಗಳ ಮಧ್ಯೆ ಒಂದು ಕೋಣಕ್ಕಾಗಿ ಗಲಾಟೆಯಾಗಿದೆ. ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಕುಣಿಬೆಳಕೆರೆ ಮತ್ತು ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಸ್ಥರ ಮಧ್ಯೆ. ಇದು ಪೊಲೀಸ್ ಠಾಣೆ ಮೆಟ್ಟಿಲೇರಿ ಕೋಣವನ್ನೇ ವಶಕ್ಕೆ ಪಡೆಯುವ ಪ್ರಸಂಗ ಜರುಗಿತು.
ಎರಡೂ ಗ್ರಾಮಗಳ ಗ್ರಾಮಸ್ಥರು ಕೋಣ ತಮದೆಂದು ಪರಸ್ಪರ ಕಿತ್ತಾಡಿಕೊಂಡು ಆಯಾ ಗ್ರಾಮದ ಮಲೆಬೆನ್ನೂರು ಠಾಣೆ ಹಾಗೂ ಹೊನ್ನಾಳಿ ಠಾಣೆಗೆ ದೂರು ನೀಡಿದ್ದು, ಕುಣೆಬೆಳಕೆರೆ ಗ್ರಾಮಸ್ಥರು ನಮ ಕೋಣ 8 ವರ್ಷದ್ದು ಅಂದರೆ, ಕುಳಗಟ್ಟೆ ಗ್ರಾಮಸ್ಥರು ನಮ ಕೋಣ 3 ವರ್ಷದ್ದು ಎಂದು ಹೇಳುತ್ತಿದ್ದರು.
ಕೊನೆಗೆ ಕೋಣ ಯಾರಿಗೆ ಸೇರಿದ್ದು ಎಂದು ತಿಳಿಯಲು ಪೊಲೀಸರು ಪಶು ವೈದರ ಮೊರೆ ಹೋದಾಗ, ವೈದ್ಯರು ಕೋಣದ ಹಲ್ಲುಗಳನ್ನು ಪರಿಶೀಲಿಸಿ 6 ವರ್ಷದ ಕೋಣ ಎಂದು ದೃಢಪಡಿಸಿದ್ದಾರೆ.
ಬಳಿಕವಷ್ಟೇ ಈ ಕೋಣ ಎರಡು ಗ್ರಾಮದ ಗ್ರಾಮಸ್ಥರದ್ದಲ್ಲ. ಇದು ದೇವರಿಗೆ ಬಿಟ್ಟಿರುವ ಕೋಣ ಎಂದು ಗೊತ್ತಾಗಿದೆ. ದೇವರ ಕೋಣವನ್ನು ಪೊಲೀಸರು ಶಿವಮೊಗ್ಗದ ಗೋಶಾಲೆಗೆ ಬಿಟ್ಟಿದ್ದಾರೆ.