ಬೆಂಗಳೂರು,ಮೇ 15- ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ನಿಗಮಮಂಡಳಿಗಳ ಅಧ್ಯಕ್ಷರ ಸ್ಥಾನಪಲ್ಲಟ ಹಾಗೂ ಸಚಿವ ಸಂಪುಟ ಪುನರ್ ರಚನೆ ಕುರಿತು ಚರ್ಚೆಗಳಾಗುವ ನಿರೀಕ್ಷೆಗಳಿವೆ.
ನಿಗಮ ಮಂಡಳಿಗಳಿಗೆ ಕಳೆದ ಆರು ತಿಂಗಳಿಂದೀಚೆಗೆ ನೇಮಕಾತಿಗಳಾಗಿದ್ದು, ಎರಡೂವರೆ ವರ್ಷಗಳ ಕಾಲಾವಧಿ ಅಧಿಕಾರ ನೀಡಲಾಗಿದೆ. ಹೀಗಾಗಿ ಇನ್ನೂ ಎರಡು ವರ್ಷ ಅಧ್ಯಕ್ಷರ ಅವಧಿ ಅಬಾಧಿತ ಎಂದು ಬಿಂಬಿಸಲಾಗಿದೆ. ಆದರೆ ಬಹಳಷ್ಟು ಮಂದಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ದೂರುಗಳಿವೆ. ಅವರುಗಳನ್ನು ವಜಾಗೊಳಿಸಿ ಪಕ್ಷ ನಿಷ್ಠಾವಂತರಿಗೆ ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹಗಳಿವೆ.
ಲೋಕಸಭಾ ಚುನಾವಣೆಗೂ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ,ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುವುದಿಲ್ಲವೋ, ಪಕ್ಷಕ್ಕೆ ಬೂತ್ ಮಟ್ಟದಿಂದ ಶಕ್ತಿ ತುಂಬುವುದಿಲ್ಲವೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಅದರ ಹೊರತಾಗಿಯೂ ಬಹಳಷ್ಟು ಮಂದಿ ಹೈಕಮಾಂಡ್ ಆದೇಶವನ್ನು ಲೆಕ್ಕಿಸದೆ ವೈಯಕ್ತಿಕ ಹಾಗೂ ಸ್ವಾರ್ಥಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ದೂರುಗಳಿವೆ. ಹೀಗಾಗಿ ಅವಧಿಗೂ ಮೊದಲೇ ಕೆಲವರ ಬದಲಾವಣೆಯ ಚರ್ಚೆಗಳು ನಡೆಯಲಿವೆ ಎಂದು ಹೇಳಲಾಗಿದೆ.
ಪ್ರಮುಖವಾಗಿ ಸಚಿವ ಸಂಪುಟ ಸಭೆಯಲ್ಲಿ ಸಾಕಷ್ಟು ಬದಲಾವಣೆಗಳಾಗುವ ನಿರೀಕ್ಷೆಗಳಿವೆ. ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಕ್ಷೇತ್ರಗಳಿಗೆ ಉಸ್ತುವಾರಿ ಸಚಿವರುಗಳನ್ನೇ ಹೊಣೆ ಮಾಡಲಾಗುವುದು ಎಂಬ ಸಂದೇಶವನ್ನು ಆರಂಭದಲ್ಲೇ ನೀಡಲಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ಬಹಳಷ್ಟು ಸಚಿವರ ನೆತ್ತಿಯ ಮೇಲೆ ತೂಗುಗತ್ತಿಯಾಗಿದೆ.
ಸಂಪುಟಕ್ಕೆ ಸೇರ್ಪಡೆಯಾಗುವವರ ಸರತಿ ಸಾಲು ದೊಡ್ಡದಿದೆ. ಬಹಳಷ್ಟು ಹಿರಿಯ ಶಾಸಕರು, ಪ್ರಭಾವಿಗಳು ಸಂಪುಟದಲ್ಲಿ ಅವಕಾಶ ಗಿಟ್ಟಿಸಬೇಕು ಎಂದು ಲಾಭಿ ನಡೆಸುತ್ತಲೇ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಕ್ಷೇತ್ರಗಳಲ್ಲಿ ಸಚಿವರ ಬದಲಾವಣೆಯಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗೇಳುವುದು ಸಹಜವಾಗಿದೆ.
ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ಹೀಗಾಗಿ ಅಸಮಾಧಾನಿತರು, ಅತೃಪ್ತರು ಯಾವುದೇ ಬಹಿರಂಗ ಹೇಳಿಕೆ ನೀಡದೇ ಪಕ್ಷಕ್ಕಾಗಿ ಸಹಿಸಿಕೊಳ್ಳಬೇಕೆಂಬ ಕಟ್ಟುನಿಟ್ಟಿನ ನಿರ್ದೇಶನಗಳು ಜಾರಿಯಲ್ಲಿದ್ದವು. ಅದರಂತೆ ಬಹಳಷ್ಟು ಹಿರಿಯ ಶಾಸಕರು ನಡೆದುಕೊಂಡಿದ್ದಾರೆ.
ಬಿ.ಆರ್.ಪಾಟೀಲ್, ಬಸವರಾಜರಾಯರೆಡ್ಡಿಯಂತಹ ಇಬ್ಬರನ್ನು ಹೊರತುಪಡಿಸಿದರೆ ಬಹುತೇಕ ಶಾಸಕರು ಉಸಿರೆತ್ತದೆ ಅವುಡುಗಚ್ಚಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ.ಅಜಯ್‌ಸಿಂಗ್‌ರಂತಹ ಪ್ರಭಾವಿ ಶಾಸಕರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ.ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಸಂಪುಟದಲ್ಲಿ ಅವಕಾಶಕ್ಕಾಗಿ ಈ ರೀತಿಯ ಹಲವು ಶಾಸಕರು ಧ್ವನಿಯೆತ್ತಲಿದ್ದಾರೆ ಎಂಬ ಚರ್ಚೆಗಳಿವೆ.
ಮುಂದಿನ ದಿನಗಳಲ್ಲಿ ಗ್ರಾಮೀಣ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿವೆ. ಪಕ್ಷದ ಬಲವರ್ಧನೆಗೆ ಸ್ಥಳೀಯ ನಾಯಕತ್ವವನ್ನು ಸದೃಢಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆವರೆಗೂ ತಾಳೆಯಿರಲಿ ಎಂದು ಹೈಕಮಾಂಡ್ ನಾಯಕರು ಸಂಪುಟದ ಆಕಾಂಕ್ಷಿಗಳಿಗೆ ಮತ್ತು ಪ್ರಭಾವಿಗಳ ಮನವೊಲಿಸುವ ಸಾಧ್ಯತೆಗಳಿವೆ.
ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಈ ಮೊದಲು ಭಾರೀ ಚರ್ಚೆಯಾಗಿತ್ತು. ಈಗ ಮತ್ತೊಮೆ ಅದು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ.ಏನೇ ಆದರೂ ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯನ್ನು ತೀವ್ರಗೊಳಿಸುವುದನ್ನು ತಳ್ಳಿಹಾಕುವಂತಿಲ್ಲ.