ಹಾಸನ,ಡಿ.5- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನಕ್ಕಾಗಿ ಹಾಗೂ ವಿರೋಧಪಕ್ಷಗಳ ಅಪಪ್ರಚಾರದ ವಿರುದ್ಧ ನಗರದಲ್ಲಿ ಆಯೋಜಿಸಲಾಗಿದ್ದ ಜನಕಲ್ಯಾಣ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು.
ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಕೆ.ಎನ್.ರಾಜಣ್ಣ, ಚೆಲುವರಾಯಸ್ವಾಮಿ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ವೆಂಕಟೇಶ್, ಎಚ್.ಸಿ. ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಎಚ್. ಮುನಿಯಪ್ಪ, ಲಕ್ಷ್ಮೀಹೆಬ್ಬಾಳ್ಕರ್, ಭೈರತಿ ಸುರೇಶ್, ಎಚ್.ಕೆ.ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಡಿ.ಸುಧಾಕರ್, ರಹೀಂಖಾನ್, ಜಮೀರ್ ಅಹಮದ್ ಖಾನ್, ಹಾಸನ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಸಂಪುಟದ ಹಲವು ಸಚಿವರು ಭಾಗವಹಿಸಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅವರ ಗೈರು ಹಾಜರಿ ಎದ್ದುಕಾಣುತ್ತಿತ್ತು.ಮುಡಾ ಪ್ರಕರಣ ಹಾಗೂ ವಕ್‌್ಫ ಪ್ರಕರಣದಲ್ಲಿ ವಿರೋಧಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದುರುದ್ದೇಶಪೂರಕವಾಗಿ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿ ಆಯೋಜಿಸಲಾಗಿದ್ದ ಸಮಾವೇಶಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.
ಜೆಡಿಎಸ್ನ ಭದ್ರಕೋಟೆ ಹಾಸನದಲ್ಲಿ ಬೆಳಗಾವಿ ಅಧಿವೇಶನಕ್ಕೂ ಕೆಲವೇ ದಿನಗಳ ಮುನ್ನ ಆಯೋಜಿಸಲಾಗಿದ್ದ ಈ ಸಮಾವೇಶ ರಾಜಕೀಯವಾಗಿ ತೀವ್ರ ಗಮನ ಸೆಳೆಯಿತು.
ರಾಜ್ಯದ ನಾನಾ ಮೂಲೆಗಳಿಂದಲೂ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಹಾಸನದಾದ್ಯಂತ ಫ್ಲೆಕ್‌್ಸಗಳು, ಬ್ಯಾನರ್ಗಳು ರಾರಾಜಿಸುತ್ತಿದ್ದವು.
ಕಾರ್ಯಕ್ರಮದಲ್ಲಿ ಶೋಷಿತ ವರ್ಗಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರನ್ನು ಸನಾನಿಸಿದವು.
ಕೆಪಿಸಿಸಿ ಕಿಸಾನ್ ಘಟಕದಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ನೇಗಿಲನ್ನು ಉಡುಗೊರೆಯನ್ನಾಗಿ ನೀಡಲಾಯಿತು. ಆರಂಭದಲ್ಲಿ ಕೆ.ಎನ್.ರಾಜಣ್ಣ ಮಾತನಾಡಿ, ಚುನಾವಣೆಯ ನಿಜವಾದ ಚಾಣಕ್ಯ ಎಂದರೆ ಅದರು ರಣದೀಪ್ ಸಿಂಗ್ ಸುರ್ಜೇವಾಲ. ಕಳೆದ 25 ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ಗೆ ಭವಿಷ್ಯ ಇಲ್ಲ ಎಂಬ ವಾತಾವರಣದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರ ಮಾರ್ಗದರ್ಶನದಲ್ಲಿ ಲೋಕಸಭೆಯಲ್ಲಿ ಗೆಲುವು ಕಂಡಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರಿಗೌಡ ಅವರು ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ. ಇದು ಪಕ್ಷದ ಕಾರ್ಯಕ್ರಮವಾಗಿದ್ದರೂ ತಳ ಸಮುದಾಯಗಳ ಜಾಗೃತಿ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಏನೂ ಇಲ್ಲದೇ ಇರುವ ಅಸಹಾಯಕ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಕೈಜೋಡಿಸಿವೆ ಎಂಬುದಕ್ಕೆ ಈ ಸಮಾವೇಶ ಉದಾಹರಣೆಯಾಗಿದ್ದು, ಮುಂದಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಇತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸಾಕ್ಷಿಯಾಗಲಿವೆ ಎಂದರು.