ಗೌರಿಬಿದನೂರು, ಜು.9- ನಗರದ ಮಧುಗಿರಿ ರಸ್ತೆಯ ರೈಲ್ವೆ ಮೇಲ್ಸೇತುವೆಯಿಂದ ಸರಕು ಸಾಗಾಣಿಕೆ ಬೃಹತ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಕಾರೊಂದು ಜಖಂ ಅಗಿರುವ ಘಟನೆ ಜರುಗಿದೆ.ಮಧುಗಿರಿ ರಸ್ತೆ ಕಡೆಯಿಂದ ರೈಲ್ವೆ ಮೇಲ್ಸೇತುವೆ ಮೇಲೆ ಗೌರಿಬಿದನೂರು ಕಡೆಗೆ ಬರುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ 25 ಅಡಿಗಳ ಕೆಳಕ್ಕೆ ಬಿದ್ದರೂ ಚಾಲಕ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧುಗಿರಿ ರಸ್ತೆ ಕಡೆಯಿಂದ ಬರುತ್ತಿರುವಾಗ ಬೆಸ್ಕಾಂ ಕಚೇರಿ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದು ಲಾರಿ ನಿಲ್ಲಿಸದೆ ಅತಿವೇಗವಾಗಿ ಚಲಾಯಿಸಿಕೊಂಡು ರೈಲ್ವೆ ಮೇಲ್ಸೇತುವೆ ಮೇಲೆ ಬರುವ ವೇಳೆ ನಿಯಂತ್ರಣ ಕಳೆದುಕೊಂಡು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡು ಲಾರಿಯಲ್ಲೇ ಸಿಲುಕಿಕೊಂಡಿದ್ದು, ಸ್ಥಳೀಯರು ಹರಸಾಹಸ ಪಟ್ಟು ಆತನನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ತಪ್ಪಿದ ಭಾರೀ ಅವಘಡ: ಲಾರಿ ಬಿದ್ದಿರುವ ರಸ್ತೆಯ ಸಮೀಪದಲ್ಲೇ ರೈಲ್ವೆ ನಿಲ್ದಾಣವಿದ್ದು, ಪ್ರತಿನಿತ್ಯ ಬೆಂಗಳೂರು-ಹಿಂದೂಪುರ ಪ್ಯಾಸೆಂಜರ್ ರೈಲಿನಲ್ಲಿ ಸಾವಿರಾರು ಮಂದಿ ಪ್ರಯಾಣಿಕರು ಇದೇ ರಸ್ತೆಯಲ್ಲಿ ಹೋಗುತ್ತಾರೆ. ಅದೃಷ್ಟವಶಾತ್ ಪ್ಯಾಸೆಂಜರ್ ರೈಲು ಬಂದು ಹೋದ ನಂತರ ಈ ಅವಘಡ ಸಂಭವಿಸಿದೆ.
ರೈಲು ಬಂದ ವೇಳೆ ಲಾರಿ ಬಿದ್ದದ್ದರೆ ಆಗುತ್ತಿದ್ದ ಸಾವು-ನೋವಿನ ಸಂಖ್ಯೆ ಊಹಿಸಲೂ ಅಸಾಧ್ಯವಾಗಿರುತ್ತಿತ್ತು. ಈ ವಿಷಯ ತಿಳಿದು ರೈಲ್ವೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ವೃತ್ತನಿರೀಕ್ಷಕ ಕೆ.ಪಿ.ಸತ್ಯನಾರಾಯಣ್, ಎಸ್‌ಐ ಗೋಪಾಲ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.