ಬೆಂಗಳೂರು,ಎ.12- ಇಂದು ಕನ್ನಡ ಕಂಠೀರವ ಡಾ. ರಾಜಕುಮಾರ್ ಅವರ ಪುಣ್ಯಸ್ಮರಣೆ ದಿನ. ನಮ್ಮನ್ನು ಅಗಲಿ ಇಂದಿಗೆ 19 ವರ್ಷಗಳು ಕಳೆದು ಹೋದವು. ಭಾರತೀಯ ಚಿತ್ರರಂಗ ಇರುವವರೆಗೂ ಅವರ ಹೆಸರು ಅಜರಾಮರವಾಗಿ ಇರುವಂತೆ ಗಟ್ಟಿಯಾದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ.
ಅವರು ಬಣ್ಣ ಹಚ್ಚಿದ ಅಷ್ಟೂ ಚಿತ್ರಗಳು ಒಂದೊಂದು ಮುತ್ತಿನಂತೆ ಅಮೂಲ್ಯವಾದವು. ಅವರ ಅಭಿನಯದ ಸಿನಿಮಾ ಕಥೆಗಳ ತಿರುಳು ಬರಿ ರಂಜನೆಗಷ್ಟೇ ಇರಲಿಲ್ಲ. ಸಮಾಜವನ್ನು ಬದಲಿಸುವ ಶಕ್ತಿ ಹೊಂದಿದ್ದವು, ಬದಲಾವಣೆ ಮಾಡಿದ್ದವೂ ಕೂಡ. ಇದಕ್ಕೆ ಉದಾಹರಣೆ ಸುಮಾರು ಕಥೆಗಳಿವೆ. ಒಂದು ಉದಾಹರಣೆ ಕೊಡುವುದಾದರೆ ಬಂಗಾರದ ಮನುಷ್ಯ ಚಿತ್ರ ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತು. ನಗರದಿಂದ ಹೋಗಿ ವಿದ್ಯಾವಂತರು ಕೃಷಿ ಕ್ಷೇತ್ರದಲ್ಲಿ ತೊಡಗುವಂತೆ ಆಯಿತು.
ಈಗಿನ ಯುವ ಪೀಳಿಗೆಯ ನಟರಿಗೆ, ತಂತ್ರಜ್ಞರಿಗೆ ಅವರು ವಿಶ್ವವಿದ್ಯಾನಿಲಯ, ಒಂದೊಂದು ಸಿನಿಮಾವನ್ನು ನೋಡಿದರೂ ಯಾವ ಅಭಿನಯ ಶಾಲೆಗೂ ಹೋಗುವ ಅಗತ್ಯವಿಲ್ಲ. ಎಲ್ಲಾ ಭಾವಗಳನ್ನು ಪರದೆಯ ಮೇಲೆ ಸರಳವಾಗಿ, ಸೊಗಸಾಗಿ ತೋರಿಸಿಕೊಟ್ಟಿದ್ದಾರೆ, ನವರಸಗಳ ರಾಜ್,
ಸಾಧನೆಯಲ್ಲಿ ಮೇರು ಪರ್ವತವನ್ನು ತಲುಪಿದ್ದರೂ ಎಂದಿಗೂ ದರ್ಪ ತೋರಲಿಲ್ಲ. ಮಿತವಾದ ಮಾತು. ಮನೆಗೆ ಯಾರೇ ಬಂದರೂ ಪ್ರೀತಿಯಿಂದ ಕರೆದು ಊಟ ಹಾಕುವ ಅಪ್ಯಾಯತೆ ಮನೋಭಾವ, ಸರಳವಾಗಿ ಜೀವಿಸಿದ ಸರಳ ಜೀವಿ. ಅವರಿಗೆ ಅವರೇ ಸಾಟಿ. ಕಂಠ ಮತ್ತು ಅಭಿನಯ ಎರಡರಲ್ಲೂ ಉತ್ತುಂಗಕ್ಕೆ ಹೋಗಿ ನಮ್ಮ ಚಿತ್ರರಂಗದಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡಿದ್ದಾರೆ. ಅವರನ್ನು ಮೀರಿಸಿದ ಮತ್ತು ಮೀರಿಸುವ ನಟ ಇನ್ನೂ ಹುಟ್ಟಿಲ್ಲ, ಮುಂದೆ ಹುಟ್ಟುವುದಿಲ್ಲ ಎನಿಸುತ್ತದೆ.
ಕನ್ನಡ ನೆಲ, ಜಲ, ಭಾಷೆ ವಿಚಾರ ಬಂದಾಗ ಮೊದಲು ಧ್ವನಿ ಎತ್ತುತ್ತಿದ್ದದ್ದು ಡಾ.ರಾಜಕುಮಾರ್. ಎಲ್ಲಾ ಭಾಷೆಗಳ ಮೇಲೂ ಪ್ರೀತಿಯಿದ್ದರೂ, ಅಲ್ಲಿ ತಮ್ಮ ಪ್ರಾಣ ಸ್ನೇಹಿತರಿದ್ದರೂ ಭಾಷೆಗೆ ಅಪಮಾನವಾಗಿದೆ ಎಂದರೆ ಎಂದಿಗೂ ಅದನ್ನು ಸಹಿಸುತ್ತಿರಲಿಲ್ಲ. ಕೂಡಲೇ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು. ಗೋಕಾಕ್ ಚಳವಳಿ ಇದಕ್ಕೆ ಉತ್ತಮ ಉದಾಹರಣೆ ಜಾತಿ, ಮತಗಳ ಹಂಗಿಲ್ಲದೆ ಬದುಕಿದವರು. ಕುವೆಂಪು ತತ್ವಗಳನ್ನು ಅಪಾರವಾಗಿ ಗೌರವಿಸಿ ನಂಬಿದ್ದ ಇವರ ಪ್ರತಿಯೊಂದು ನಡವಳಿಕೆಯಲ್ಲೂ ಅದು ಎದ್ದು ಕಾಣುತ್ತಿತ್ತು.
ಡಾ. ರಾಜ್ ಅಗಲಿಕೆಯನ್ನು ಇಂದಿಗೂ ಕನ್ನಡಿಗರು ಅರಗಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ, ಅವರು ನಮ್ಮೊಂದಿಗೆ ಇಂದಿಗೂ ಇರಬೇಕಾಗಿತ್ತು ಎನ್ನುತ್ತಾರೆ. ಈ ಪುಣ್ಯ ಸ್ಮರಣೆಯ ದಿನವನ್ನು ಅಭಿಮಾನಿಗಳು ವಿವಿಧ ರೀತಿಯ ಸಮಾಜ ಕಾರ್ಯಗಳ ಮೂಲಕ ನೆನಪಿಸಿಕೊಳ್ಳುತ್ತಾರೆ. ಪೂಜಿಸುತ್ತಾರೆ. ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಸಾವಿರಾರು ಭಕ್ತರು ಆಗಮಿಸಿ ನಮಿಸಿದ್ದಾರೆ. ದೊಡ್ಡನೆ ಕುಟುಂಬದವರೆಲ್ಲರೂ ಬಂದು ಪೂಜೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಅಭಿಮಾನಿ ಸಂಘಗಳು ಅನ್ನ ಸಂತರ್ಪಣೆ, ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜಿಸಿ ಸಮಾಜಕ್ಕೆ ನೆರವಾಗಿ ತಮ್ಮ ನೆಚ್ಚಿನ ನಟನ ಪುಣ್ಯ ಸ್ಮರಣೆ ಮಾಡುತ್ತಿದ್ದಾರೆ.