ಬೆಂಗಳೂರು,ಏ.20- ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿ.ವೈ.ವಿಜಯೇಂದ್ರ ಅವರಿಗೆ ಬರೆದಿರುವ ಪತ್ರದಲ್ಲಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ರಾಮಸ್ವಾಮಿ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆ? ಹಾಗೂ ಮುಂದಿನ ನಡೆ ಏನು? ಎಂಬುದನ್ನೂ ಪತ್ರದಲ್ಲಿ ತಿಳಿಸಿದ್ದು, ತಮನ್ನು ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಮತ್ತೊಂದೆಡೆ ಅವರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಮಾತುಗಳು ಕೂಡ ಕೇಳಿಬರುತ್ತಿವೆ.
ರಾಜೀನಾಮೆ ಪತ್ರದಲ್ಲೇನಿದೆ? : ರಾಮಸ್ವಾಮಿ ಅವರು ವಿಜಯೇಂದ್ರಗೆ ಬರೆದಿರುವ ಪತ್ರದಲ್ಲಿ, ವಿಶ್ವ ತಾಪಮಾನ ವಿಪರೀತ ಏರಿಕೆಯಿಂದ ಹವಾಮಾನದ ಅಸಮತೋಲನ ಉಂಟಾಗಿದ್ದು, ಇದರಿಂದ ನೆರೆ, ಬರ, ಚಂಡಮಾರುತ, ಭೂಕಂಪಗಳು ಹೆಚ್ಚಾಗಿವೆ. ನಾವು ಕುಡಿಯುತ್ತಿರುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ಎಲ್ಲವೂ ವಿಷಪೂರಿತವಾಗಿದೆ.
ಬೆಟ್ಟ-ಗುಡ್ಡ, ಅರಣ್ಯ ನಾಶದಿಂದ ನದಿ ಜಲಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟವೂ ಕುಸಿದು ಹೋಗಿದೆ. ಇದರಿಂದ ಜೀವ ಸಂಕುಲಗಳಿಗೆ ಸಂಕಷ್ಟ ಎದುರಾಗಿದೆ. ಈಗಲಾದರೂ ನಾವು ಜನ ಜಾಗೃತಿ ಮೂಡಿಸಿ ಪರಿಸರ ಸಂರಕ್ಷಣೆ ಕೆಲಸ ಮಾಡಬೇಕು ಎಂದು ರಾಮಸ್ವಾಮಿ ಹೇಳಿದ್ದಾರೆ.
ನಾವು ಪರಿಸರವನ್ನು ಉಳಿಸಿದರೆ, ಜೀವ ಸಂಕುಲ ಉಳಿಯುತ್ತವೆ. ಇಂತಹ ಸನ್ನಿವೇಶದಲ್ಲಿ ರಾಜಕೀಯಕ್ಕಿಂತ ಪರಿಸರ ಸಂರಕ್ಷಣೆಯೇ ಮುಖ್ಯ ಎಂದು ಭಾವಿಸಿದ್ದೇನೆ. ಹಾಗಾಗಿ ನನ್ನ ಪೂರ್ಣ ಸಮಯವನ್ನು ಕೃಷಿಯ ಜೊತೆಗೆ ಪರಿಸರ ಸಂರಕ್ಷಣೆ ಕೆಲಸದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದೇನೆ. ಈಗಾಗಲೇ ನಾನು ನಿಮೊಂದಿಗೆ ಈ ವಿಚಾರವಾಗಿ ಮಾತನಾಡಿದ್ದೇನೆ. ಇದೀಗ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇಲ್ಲಿವರೆಗೆ ತಾವೆಲ್ಲರೂ ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಕೃತಜ್ಞ ಎಂದು ತಿಳಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯ ವೇಳೆ ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕರಾಗಿದ್ದ ಇವರು ದೆಹಲಿಯಲ್ಲೇ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ನಾನು ಅತ್ಯಂತ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಭೇಟಿಯಾಗುತ್ತಿರುವುದು ಸಂತಸ ಮೂಡಿದೆ. ಇಡೀ ವಿಶ್ವದಲ್ಲೇ ಭಾರತವು ಪ್ರಗತಿಯಲ್ಲಿ ದಾಪುಗಾಲು ಇಡುತ್ತಿದೆ. ಬಿಜೆಪಿ ನಾಯಕರು ಮೌಲ್ಯಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ಇದೇ ಕಾರಣಕ್ಕೆ ನಾನು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡ ವಿಚಾರವಾಗಿ ರಾಮಸ್ವಾಮಿ ಅವರು ಭಾರೀ ಅಸಮಾಧಾನಗೊಂಡಿದ್ದರು, ಅಲ್ಲದೆ ಇತ್ತೀಚೆಗೆ ಬಿಜೆಪಿಯಿಂದಲೂ ಅಂತರ ಕಾಯ್ದುಕೊಂಡಿದ್ದರು.