ನವದೆಹಲಿ,ಫೆ.25- ಹಿಂದಿನ ಎಎಪಿ ಸರ್ಕಾರದ ಅವಧಿಯಲ್ಲಿ ಈಗ ರದ್ದುಪಡಿಸಿರುವ ಮದ್ಯನೀತಿ ಅನುಷ್ಠಾನದಿಂದಾಗಿ ಒಟ್ಟು 2002 ಕೋಟಿ ರೂ. ಆದಾಯ ನಷ್ಟವಾಗಿದೆ ಎಂಬುದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ(ಸಿಎಜಿ) ವರದಿಯಲ್ಲಿ ಬಹಿರಂಗಗೊಂಡಿದೆ.
ಸಿಎಜಿ) ವರದಿಯನ್ನು ವಿಧಾನಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಂಡಿಸುತ್ತಿದ್ದಂತೆ ಪ್ರತಿಪಕ್ಷ ಎಎಪಿ ಶಾಸಕರು ಭಾರೀ ಗದ್ದಲ, ಕೋಲಾಹಲ ಉಂಟು ಮಾಡಿದರು. ಅವರ ಪ್ರತಿಭಟನೆಯನ್ನು ಲೆಕ್ಕಿಸದೆ ಸಿಎಂ ಗುಪ್ತಾ ಅವರು ಸಿಎಜಿ ವರದಿಯನ್ನು ಮಂಡನೆ ಮಾಡಿದರು. ವರದಿಯಲ್ಲಿ ಎಎಪಿ ಸರ್ಕಾರ ಅನುಷ್ಠಾನ ಮಾಡಿದ್ದ ಮದ್ಯ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 2002 ಕೋಟಿ ನಷ್ಟವಾಗಿದೆ ಎಂಬುದನ್ನು ಉಲ್ಲೇಖ ಮಾಡಿದೆ.
2017-18ರಿಂದ 2020-21ರವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಈಗಾಗಲೇ ಸರೆಂಡರ್ ಮಾಡಿದ್ದ ಪರಾವನಿಗೆಗಳನ್ನು ಮರು ಟೆಂಡರ್ ಮಾಡುವಲ್ಲಿ ಸರ್ಕಾರ ವಿಫಲವಾದ ಕಾರಣ ಅಂದಾಜು 890 ಕೋಟಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬುದು ಬಹಿರಂಗಗೊಂಡಿದೆ.
ಸರ್ಕಾರದ ವಿಳಂಬದ ನೀತಿಯಿಂದಾಗಿ 941 ಕೋಟಿ ನಷ್ಟವಾಗಿದೆ. ಸರ್ಕಾರದ ದೂರದೃಷ್ಟಿ ಇದರಲ್ಲಿ ಇಲ್ಲದಿರುವುದು ಸ್ಪಷ್ಟವಾಗಿದೆ ಎಂದು ವರದಿ ಹೇಳಿದೆ. ರದ್ದಾದ ವರದಿಗಳನ್ನು ಸರಿಪಡಿಸುವಂತೆ ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಅಂದಿನ ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವ ಮನೀಶ್ ಸಿಸೋಡಿಯ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದನ್ನು ಸಹ ಪತ್ತೆ ಮಾಡಿದೆ.
ಸಿಎಜಿ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾದ್ದರೂ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ಕೂಡ ರಕ್ಷಣೆ ಮಾಡುವುದಿಲ್ಲ. ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಖಚಿತ ಎಂದು ಗುಪ್ತಾ ಎಚ್ಚರಿಕೆ ಕೊಟ್ಟಿದ್ದಾರೆ.
ಇದರಲ್ಲಿ ಭಾರೀ ಕಿಕ್ ಬ್ಯಾಕ್ ನಡೆದಿದೆ ಎಂಬ ಕಾರಣಕ್ಕಾಗಿಯೇ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯ, ಮಾಜಿ ಸಚಿವ ಸತ್ಯೇಂದ್ರ ಜೈನ್, ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಸೇರಿದಂತೆ ಎಎಪಿಯ ಅನೇಕ ನಾಯಕರು ಜೈಲು ಪಾಲಾಗಿದ್ದರು. ಪ್ರಸ್ತುತ ದೆಹಲಿ ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ಒಟ್ಟು 14 ಸಿಎಜಿ ವರದಿಯನ್ನು ಮಂಡಿಸುವುದಾಗಿ ರೇಖಾ ಗುಪ್ತ ಹೇಳಿದರು.