Friday, November 22, 2024
Homeರಾಜ್ಯವಿಧಾನಸಭೆಯಲ್ಲಿ ಸಚಿವರ ಗೈರು, ಪ್ರತಿಪಕ್ಷಗಳ ಶಾಸಕರಿಂದ ಕೆಲಕಾಲ ಸಭಾತ್ಯಾಗ

ವಿಧಾನಸಭೆಯಲ್ಲಿ ಸಚಿವರ ಗೈರು, ಪ್ರತಿಪಕ್ಷಗಳ ಶಾಸಕರಿಂದ ಕೆಲಕಾಲ ಸಭಾತ್ಯಾಗ

ಬೆಂಗಳೂರು,ಜು.18- ವಿಧಾನಸಭೆಯ ಕಲಾಪ ಆರಂಭದಲ್ಲಿ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಸಚಿವರಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಶಾಸಕರು ಕೆಲಕಾಲ ಸಭಾತ್ಯಾಗ ಮಾಡಿದರು.ಇಂದು ಬೆಳಿಗ್ಗೆ ವಿಧಾನಸಭೆ ಸಮಾವೇಶಗೊಂಡ ಕೂಡಲೇ ಎದ್ದುನಿಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸಚಿವರಿಲ್ಲ ಎಂದು ಆಕ್ಷೇಪವೆತ್ತಿದರು.

ಮತ್ತೊಬ್ಬ ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮೊದಲ ಸಾಲಿನಲ್ಲಿ ಯಾವ ಸಚಿವರೂ ಇಲ್ಲ. ಶೂನ್ಯವಿದೆ. 9.45 ನಿಮಿಷಕ್ಕೆ ನಾವು ಬಂದಿದ್ದೇವೆ. ಅಧಿವೇಶನ ಚೆನ್ನಾಗಿ ನಡೆಯಬೇಕು. ಹೊಸ ನಿಯಮ ಜಾರಿಗೆ ತಂದಿದ್ದೀರಿ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಅಧಿವೇಶನ ಸುಗಮವಾಗಿ ನಡೆಯಬೇಕು ಎಂದು ಹೊಸ ನಿಯಮ ತಂದಿದ್ದೀರಿ. ಆಡಳಿತ ಪಕ್ಷ ಮಾದರಿಯಾಗಬೇಕು. ಇದು ಯಾವ ರೀತಿ ಮಾಡೆಲ್‌ ಆಗಿದ್ದಾರೆ ನೋಡಿ. ಸಚಿವರಿಲ್ಲ. ಹೀಗಾಗಿ ಸದನದ ಕಲಾಪವನ್ನು 10 ನಿಮಿಷ ಮುಂದೂಡಿ, ಆಡಳಿತ ಪಕ್ಷದವರು ಬುದ್ಧಿ ಕಲಿಯಲಿ. ವಿಧಾನಸಭೆಯಲ್ಲಿ ಹಾಜರಿರಬೇಕಾದ ಸಚಿವರ ಹೆಸರನ್ನು ಓದಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಅವರನ್ನು ಆಗ್ರಹಿಸಿದರು.

ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್ಣ ಮಾತನಾಡಿ, ಶಾಸಕರಿಗೆ ವಿಪ್‌ ನೀಡಲಾಗಿದೆ. ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಹೇಳಲು ಮುಂದಾದರು.ಆಗ ಅಶೋಕ್‌, ರಾಜೀನಾಮೆ ಕೊಟ್ಟು ನೀವು ಮಂತ್ರಿಯಾಗಿ ಎಂದು ಛೇಡಿಸಿದರು.ಮತ್ತೆ ಮಾತು ಮುಂದುವರೆಸಿದ ಬಸನಗೌಡ ಪಾಟೀಲ್‌ ಯತ್ನಾಳ್‌, ಗಂಭೀರವಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸುತ್ತೇವೆ, ಮುಖ್ಯಮಂತ್ರಿಗಳಿಲ್ಲ, ಸಚಿವರಿಲ್ಲ ಅವರಿಗೆ ನೈತಿಕ ಹೊಣೆ ಇಲ್ಲ. ಇ.ಡಿ ಪತ್ರಿಕಾ ಹೇಳಿಕೆ ನೀಡಿದೆ ನೋಡಿ ಎಂದು ಪ್ರದರ್ಶಿಸಿದರು.

ಅಷ್ಟರಲ್ಲಿ ಸದನಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ನಾವು ಮೂರ್ನಾಲ್ಕು ಸಚಿವರಿದ್ದೇವೆ. ಅವರು ಚರ್ಚೆ ಮಾಡಲಿ. ಸರ್ಕಾರ ಉತ್ತರ ನೀಡುತ್ತದೆ ಎಂದರು.

ಮತ್ತೆ ಅಶೋಕ್‌ ಮಾತನಾಡಿ, ಕೋಟ್ಯಂತರ ರೂ. ಅಧಿವೇಶನಕ್ಕಾಗಿ ಖರ್ಚಾಗುತ್ತದೆ. ಶಾಸಕರ ಊಟ, ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಇವರಿಗೆ ಏನು ದಾಡಿ ಬಂದಿದೆ. ಬೇಜವಾಬ್ದಾರಿಯಿಂದ ಸರ್ಕಾರ ನಡೆದುಕೊಳ್ಳುತ್ತಿದೆ. ಇದನ್ನು ಪ್ರತಿಭಟಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಹೇಳಿ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೊರನಡೆದರು. ಜೆಡಿಎಸ್‌‍ ಶಾಸಕರೂ ಕೂಡ ಅವರನ್ನು ಹಿಂಬಾಲಿಸಿ ಸದನದಿಂದ ಹೊರನಡೆದರು.

ಆಗ ಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ವಿಪ್‌ ಅವರೇ ಎಲ್ಲಿದ್ದೀರಾ?, ಮನೆಯಲ್ಲಿದ್ದೀರಾ? ಅಥವಾ ಅಸೆಂಬ್ಲಿಯಲ್ಲಿದ್ದೀರಾ?, ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಚಿವರಿಲ್ಲದೇ ಇರುವುದು ತಪ್ಪು. ಅರ್ಥ ಮಾಡಿಕೊಳ್ಳಬೇಕು. ಪ್ರತಿಪಕ್ಷದವರ ಆಗ್ರಹದಲ್ಲಿ ತಪ್ಪು ಇಲ್ಲ. ಮಂತ್ರಿಗಳಿಂದ ಕೆಟ್ಟ ಹೆಸರು ಬರುತ್ತದೆ ಎಂದರು.

ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಆಡಳಿತ ಪಕ್ಷದ ಶಾಸಕ ರಾಜು ಕಾಗೆ, ನಮ ಕ್ಷೇತ್ರದವರು ಭೇಟಿಯಾಗಲು ಬಂದಿರುತ್ತಾರೆ. ಅವರನ್ನು ಮಾತನಾಡಿಸಿ ಬರಲು ತಡವಾಗುತ್ತದೆ. ನೀವು ಅಧಿವೇಶನವನ್ನು 9.30ಕ್ಕೆ ಕರೆದರೆ ತೊಂದರೆಯಾಗುತ್ತದೆ. 11 ಗಂಟೆಗೆ ಆರಂಭಿಸಿದರೆ ಅನುಕೂಲ. ನೀವು 7 ಗಂಟೆಗೆ ಕರೆದರೂ ಬರುತ್ತೇವೆ. ಸಂಜೆ ವೇಳೆ ಶಾಸಕರು ಭೇಟಿಗೆ ಅವಕಾಶ ಮಾಡಿಕೊಟ್ಟರೆ ಅನುಕೂಲ ಎಂದರು.

ಮತ್ತೆ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್‌, ವಿಧೇಯಕಗಳಿವೆ. ವಿಧೇಯಕಗಳ ಚರ್ಚೆಯಾಗಬೇಕು, ಕಾರ್ಯಕಲಾಪಗಳ ಪಟ್ಟಿ ಮುಗಿಸಬೇಕು, ಸಚಿವರಿಗೂ ಜವಾಬ್ದಾರಿ ಇರಬೇಕು, ಅಧಿವೇಶನ ನಡೆಸುವ ವೇಳೆ ಸಭೆಗಳನ್ನು ನಡೆಸಬಾರದು, ಅಧಿವೇಶನಕ್ಕೆ ತಡವಾಗಿ ಬರುವುದು ಸರಿಯಲ್ಲ. ಮಂತ್ರಿಗಳು ಸರಿಯಾದ ಸಮಯಕ್ಕೆ ಬಂದರೆ ಶಾಸಕರು ಬರುತ್ತಾರೆ. ಅಧಿವೇಶನದ ಸಂದರ್ಭದಲ್ಲಿ ಬೆಳಿಗ್ಗೆ ಸಭೆ ನಡೆಸುವುದು ಸರಿಯಲ್ಲ. ಆ ಕಾರಣಕ್ಕೆ ಬೆಳಿಗ್ಗೆ 9.30ಕ್ಕೆ ಅಧಿವೇಶನವನ್ನುಆರಂಭಿಸುತ್ತಿದ್ದೇವೆ.

ಸಚಿವರು ಕಚೇರಿಯಲ್ಲಿದ್ದರೆ ಜನರೂ ಭೇಟಿಯಾಗಲು ಬರುತ್ತಾರೆ. ಸರ್ಕಾರಕ್ಕೆ ಒಂದು ವರ್ಷ ಕಳೆದಿದೆ. ಇನ್ನಾದರೂ ಇದು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸೂಚಿಸಿದರು.

ಆಡಳಿತ ಪಕ್ಷದ ಶಾಸಕ ಶರತ್‌ ಕುಮಾರ್‌ ಬಚ್ಚೇಗೌಡ ಮಾತನಾಡಿ, ಮಂಗಳವಾರ ಸಂಜೆ ವಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಇಂದು ಚರ್ಚೆ ಮಾಡಿ ಪರಿಹಾರ ಹುಡುಕಬೇಕಿತ್ತು. ಪ್ರಚಾರಕ್ಕಾಗಿ ಸಭಾತ್ಯಾಗ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಸಮಾಜಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ಸಭಾಧ್ಯಕ್ಷರ ಕಾಳಜಿ ಅರ್ಥವಾಗುತ್ತದೆ.

ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಪ್ರಮುಖ ವಿಚಾರ. ಸರ್ಕಾರದ ಆಡಳಿತದ ವೈಫಲ್ಯ, ಸುಧಾರಣೆ ಬಗ್ಗೆ ವಿರೋಧಪಕ್ಷಗಳು ಸಲಹೆ ನೀಡಲು ಅಧಿವೇಶನ ಬಳಕೆಯಾಗಬೇಕು. ಮಹತ್ತರವಾದ ಸಭೆ ಇದು. ಯಾವಾಗಲೂ ಮುಖ್ಯಮಂತ್ರಿ ಇರುವುದಿಲ್ಲ. ಸಚಿವರು, ಅಧಿಕಾರಿಗಳು ಇರುತ್ತಾರೆ. ವಿಪಕ್ಷಗಳು ಮಾಡುವ ಟೀಕೆ, ಸಲಹೆಗಳನ್ನು ನೋಟ್‌ ಮಾಡಿಕೊಳ್ಳುತ್ತೇವೆ. ನಾವುಮೂರ್ನಾಲ್ಕು ಸಚಿವರು ಇದ್ದೆವು. ವಿಪಕ್ಷಗಳು ಚರ್ಚೆ ಪ್ರಾರಂಭಿಸಬೇಕಿತ್ತು. ನಾವು ಉತ್ತರ ಕೊಡಲು ಸಿದ್ಧವಿದ್ದೆವು ಎಂದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ 11 ಗಂಟೆಗೆ ಅಧಿವೇಶನ ಕರೆದರೂ, 11.30 ಹಾಗೂ 12 ಗಂಟೆಗೆ ಸದನ ಶುರುವಾಗುತ್ತಿತ್ತು. 20 ನಿಮಿಷ ವಿಳಂಬವಾಗಿದೆ. ರಾಜಕಾರಣಕ್ಕಾಗಿ ಸಭೆ ತ್ಯಾಗ ಮಾಡಬಾರದು. ನಾವು ತಪ್ಪನ್ನು ತಿದ್ದಿಕೊಳ್ಳುತ್ತೇವೆ ಎಂದರು.

ಮತ್ತೆ ಮಾತನಾಡಿದ ಸಭಾಧ್ಯಕ್ಷರು, ಸುಗಮ ಕಲಾಪ ಆಗಬೇಕು. ನಮನಮ ತಪ್ಪನ್ನು ಅರ್ಥ ಮಾಡಿಕೊಳ್ಳಬೇಕು. ಆಡಳಿತ ಪಕ್ಷದವರು ವಿರೋಧಪಕ್ಷದವರನ್ನು ದೂಷಿಸುವುದು, ವಿರೋಧಪಕ್ಷದವರು ಆಡಳಿತ ಪಕ್ಷದವರನ್ನು ದೂಷಿಸುವುದು ಸರಿಯಲ್ಲ. ಏನೇ ಕೆಲಸವಿದ್ದರೂ ಸಕಲಾಕ್ಕೆ ಸದನಕ್ಕೆ ಹಾಜರಾಗುವುದನ್ನು ರೂಢಿಸಿಕೊಳ್ಳಬೇಕು. ಸದನಕ್ಕೆ ಹೋಗುತ್ತೇವೆ ಎಂದರೆ ಶಾಸಕರಿಗೆ ಯಾರೂ ಬೇಡ ಎನ್ನುವುದಿಲ್ಲ. ಸಭಾತ್ಯಾಗ ಮಾಡುವುದು ಸರಿ ಎನ್ನುವುದಿಲ್ಲ.

ಅವರು ಚರ್ಚೆ ಪ್ರಾರಂಭ ಮಾಡಬೇಕಿತ್ತು. ಎಲ್ಲರಲ್ಲೂ ಮನಃ ಪರಿವರ್ತನೆಯಾಗಬೇಕು ಎಂದು ಹೇಳಿ ಮಂಗಳವಾರ ಸದನಕ್ಕೆ ಬೇಗ ಬಂದ ಶಾಸಕರ ಹೆಸರನ್ನು ಉಲ್ಲೇಖಿಸಿ ರೈತನಿಗೆ ಮಾಲ್‌ನಲ್ಲಿ ಅಪಮಾನ ಮಾಡಿದ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರು.
ಅಷ್ಟರಲ್ಲಿ ವಿರೋಧಪಕ್ಷದ ಶಾಸಕರು ಸದನಕ್ಕೆ ಆಗಮಿಸಿದರು.

ಕಾಂಗ್ರೆಸ್‌‍ ಶಾಸಕ ಕೋನರೆಡ್ಡಿ ಮಾತನಾಡಿ, ಬಿಜೆಪಿಯ ಬಸನಗೌಡ ಯತ್ನಾಳ್‌, ಅಶೋಕ್‌ರವರ ನಡುವೆಯೇ ಗೊಂದಲವಿದೆ ಎಂದರು. ಆಗ ಯತ್ನಾಳ್‌ ಮಾತನಾಡಿ, ನಿಮದನ್ನು ನೋಡಿಕೊಳ್ಳಿ. ನಿಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ ಜಗಳದ ಬಗ್ಗೆ ನಿಮಗೇಕೆ ಕಾಳಜಿ ಎಂದು ತಿರುಗೇಟು ನೀಡಿದರು.

RELATED ARTICLES

Latest News