ನವದೆಹಲಿ, ಅ.1- ಏಷ್ಯಾ ಕಪ್ ಮತ್ತು ಮೆಡಲ್‌ಗಳು ಬೇಕಾದರೆ ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಂದರೆ ಮಾತ್ರ ನೀಡುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮೊಂಡು ಹಠ ಹಿಡಿದಿದ್ದಾರೆ.
ಮಳೆ ನಿಂತರೂ, ಮಳೆ ಹನಿ ನಿಂತಿಲ್ಲ ಎಂಬಂತೆ ಏಷ್ಯಾಕಪ್ ಮುಗಿದರೂ ವಿವಾದ ಇನ್ನೂ ಕೂಡ ಕೊನೆಗೊಂಡಿಲ್ಲ. ಹ್ಯಾಂಡ್‌ಶೇಕ್‌ನಿಂದ ಶುರುವಾದ ಈ ವಿವಾದ ಇದೀಗ ಏಷ್ಯಾಕಪ್ ಟ್ರೋಫಿ ಹಸ್ತಾಂತರದ ವಿಷಯಕ್ಕೆ ಬಂದು ನಿಂತಿದೆ.
ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಭಾರತೀಯ ಆಟಗಾರರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಹಾಗೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲ್ಲ ಎಂದು ಪಟ್ಟು ಹಿಡಿದಿದ್ದರು. ಟೀಮ್ ಇಂಡಿಯಾ ಆಟಗಾರರ ಈ ನಿರ್ಧಾರದಿಂದ ಮುಖಭಂಗಕ್ಕೆ ಒಳಗಾದ ನಖ್ವಿ, ಏಷ್ಯಾಕಪ್ ಟ್ರೋಫಿ ಹಾಗೂ ವಿನ್ನರ್ ತಂಡದ ಮೆಡಲ್‌ಗಳನ್ನು ಹೊಟೇಲ್ ರೂಮ್‌ಗೆ ಕೊಂಡೊಯ್ಯುವಂತೆ ಸೂಚಿಸಿದ್ದರು.
ಹೀಗಾಗಿ ಭಾರತೀಯ ಆಟಗಾರರು ಟ್ರೋಫಿ ಇಲ್ಲದೆ ಏಷ್ಯಾಕಪ್ ಅನ್ನು ಸಂಭ್ರಮಿಸಿದ್ದರು.ಇದೀಗ ಟೀಮ್ ಇಂಡಿಯಾಗೆ ಟ್ರೋಫಿ ಹಿಂತಿರುಗಿಸುವಂತೆ ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಆಗ್ರಹಿಸಿದ್ದಾರೆ.
ಎಸಿಸಿ ಸಭೆಯಲ್ಲಿ ಈ ಬಗ್ಗೆ ವಾದಗಳು ನಡೆದಿದ್ದು, ನಖ್ವಿ ಅವರ ನಡೆಗೆ ಬಿಸಿಸಿಐ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಆಕ್ರೋಶದ ಬೆನ್ನಲ್ಲೇ ಟ್ರೋಫಿ ಹಸ್ತಾಂತರಿಸಲು ನಖ್ವಿ ಒಪ್ಪಿಕೊಂಡಿದ್ದಾರೆ.
ಆದರೆ ಇದಕ್ಕೂ ಒಂದು ಷರತ್ತು ವಿಧಿಸಿ ಉದ್ಧಟತನ ಮೆರೆದಿದ್ದಾರೆ.ಹೌದು, ಟೀಮ್ ಇಂಡಿಯಾಗೆ ಟ್ರೋಫಿ ಬೇಕಿದ್ದರೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಂದು ನನ್ನ ಕೈಯಿಂದ ಸ್ವೀಕರಿಸಬೇಕು ಎಂದಿದ್ದಾರೆ.
ನಖ್ವಿ ಅವರ ಈ ಬೇಡಿಕೆಗೂ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದ್ದರೂ ಎಸಿಸಿ ಮುಖ್ಯಸ್ಥ ತನ್ನ ಪಟ್ಟನ್ನು ಸಡಿಲಿಸಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಏಷ್ಯಾಕಪ್ ವಿವಾದ ಸದ್ಯಕ್ಕಂತು ಮುಗಿಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ.