Thursday, September 19, 2024
Homeಬೆಂಗಳೂರುಫ್ಲೈಓವರ್‌ ಮೇಲೆ ಭೀಕರ ಅಪಘಾತ : ಹೈವೇ ಪೆಟ್ರೋಲಿಂಗ್‌ ಸಿಬ್ಬಂದಿ ಸಾವು

ಫ್ಲೈಓವರ್‌ ಮೇಲೆ ಭೀಕರ ಅಪಘಾತ : ಹೈವೇ ಪೆಟ್ರೋಲಿಂಗ್‌ ಸಿಬ್ಬಂದಿ ಸಾವು

ಬೆಂಗಳೂರು,ಆ.4- ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ ಮೇಲೆ ಕೆಟ್ಟು ನಿಂತ ಕಾರನ್ನು ಟೋಯಿಂಗ್‌ ಮಾಡುವ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹೈವೇ ಪೆಟ್ರೋಲಿಂಗ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ರಾತ್ರಿ ಸಂಭವಿಸಿದೆ.

ಗೊಲ್ಲಹಳ್ಳಿಯ ನಿವಾಸಿ ಮಂಜುನಾಥ್‌(52) ಮೃತಪಟ್ಟ ದುರ್ದೈವಿ.ಮೇಲ್ಸೇತುವೆಯ ಕೂಡ್ಲಿಗೇಟ್‌ ಬಳಿ ರಾತ್ರಿ 11.15ರ ಸುಮಾರಿನಲ್ಲಿ ಕಾರೊಂದು ಕೆಟ್ಟು ನಿಂತಿದ್ದು, ಅದನ್ನು ಟೋಯಿಂಗ್‌ ಮಾಡಿಕೊಳ್ಳಲು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳಾದ ಮಂಜುನಾಥ್‌, ರಾಜಣ್ಣ ಎಂಬುವರು ತೆರಳಿದ್ದು, ವಾಹನವನ್ನು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅದೇ ಮಾರ್ಗವಾಗಿ ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಕಾರು ಹಾಗೂ ಟೋಯಿಂಗ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಈ ವೇಳೆ ರಾಜಣ್ಣ ಮತ್ತು ಮಂಜುನಾಥ್‌ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮಂಜುನಾಥ್‌ ಮೃತಪಟ್ಟಿದ್ದಾರೆ.

ಮಂಜುನಾಥ್‌ ಅವರ ಮಗಳ ಮದುವೆಯ ಸಿದ್ದತೆ ನಡೆಯುತ್ತಿದ್ದು, ಬೆಳಗ್ಗೆ ಲಗ್ನಪತ್ರಿಕೆಗಳನ್ನು ಹಂಚಿ ರಾತ್ರಿ ಕೆಲಸಕ್ಕೆ ಬಂದಿದ್ದರು. ಆದರೆ ಆ ವಿಧಿ ಮದುವೆ ಮನೆಯ ಸಂಭ್ರಮವನ್ನೇ ಕಸಿದುಕೊಂಡಿದೆ.

ಖುಷಿ ಖುಷಿಯಿಂದ ಮದುವೆಯ ಸಿದ್ದತೆಯಲ್ಲಿದ್ದ ಕುಟುಂಬ ಈ ಅಪಘಾತ ಬರಸಿಡಿಲಿನಂತೆ ಅಪ್ಪಳಿಸಿದೆ. ಕುಟುಂಬ ಸದಸ್ಯರಲ್ಲಿ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ಅಪಘಾತ ಸಂಬಂಧ ಹುಳಿಮಾವು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News