ಟಿ.ನರಸೀಪುರ, ಫೆ.14- ಕುಂಭಮೇಳದಲ್ಲಿ ಚರಸ್ ಎಂಬ ಮಾದಕ ವಸ್ತು ತೋರಿಸಿ ಜನರನ್ನು ಆಕರ್ಷಿಸುತ್ತಿದ್ದ ಮೂವರು ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿ ಅವರಿಂದ 70 ಗ್ರಾಂ ತೂಕದ ಚರಸ್ ಅನ್ನು ವಶಪಡಿಸಿಕೊಂಡಿರುವ ಘಟನೆ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ನಡೆದಿದೆ.
ಮೈಸೂರಿನ ಶ್ರೀ ರಾಂ ಪುರದ ಓಂ ಪ್ರಕಾಶ್ (44) ,ರೇಖಾ (33) ಹಾಗು ರಾಜಾಸ್ಥಾನದ ಬೇವರ್ ಜಿಲ್ಲೆರಾಯ್ ಪುರ ತಾಲೂಕಿನ ದೂಳ್ ಕೋಟ್ ಗ್ರಾಮದ ಪೂಜಾ (20) ಎಂಬುವರೇ ಬಂಧಿತ ಆರೋಪಿಗಳು.
ಆರೋಪಿಗಳು ಕುಂಭಮೇಳ ಕ್ಷೇತ್ರದ ತಿರುಮಕೂಡಲಿನ ಶ್ರೀ ಅಗಸ್ಟ್ರೇಶ್ವರ ಸ್ವಾಮಿ ಸ್ನಾನ ಘಟ್ಟದ ಬಳಿ ನಿಂತು ಚರಸ್ ಎಂಬ ಮಾದಕ ವಸ್ತು ತೋರಿಸಿದಕುಂಭದಲ್ಲಿ ಸ್ನಾನಮಾಡಿ ಮಜಾ ಮಾಡಿ,ಸಂತೋಷಪಡಲು ನಮ್ಮೊಂದಿಗೆ ಬನ್ನಿ ಎಂದು ಭಕ್ತಾ ಗಳನ್ನು ಹಿಂದಿ ಭಾಷೆಯ ಮೂಲಕ ಆಕರ್ಷಣೆ ಮಾಡುತ್ತಿದ್ದರು.
ಈ ವೇಳೆ ಅಲ್ಲೇ ಕರ್ತವ್‌ಯದಲ್ಲಿದ್ದ ಮುಖ್ಯಪೇದೆ ಪ್ರಭಾಕರ್, ಪೇದೆಗಳಾದ ರತ್ನಮ್ಮ ಹಾಗು ಸುದೀಪ್ ಅನುಮಾನಗೊಂಡು ಅವರನ್ನು ವಿಚಾರಿಸಲಾಗಿ ಕೈಯ್ಯಲ್ಲಿದ್ದ ವಸ್ತು ವನ್ನು ಬಚ್ಚಿಟ್ಟುಕೊಂಡಿದ್ದರಿಂದ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ಗೊಳಪಡಿಸಲಾಯಿತು.
ವಿಚಾರಣೆ ವೇಳೆ ನದಿ ಸಂಗಮದಲ್ಲಿ ಕುಂಭಸ್ನಾನ ಮಾಡಿ ಚರಸ್ ಸೇವಿಸಲು ಬಂದಿರುವುದಾಗಿ ಆರೋಪಿ ರೇಖಾ ತಿಳಿಸಲಾಗಿ ಸಂಗಮ ಘಟ್ಟದಲ್ಲಿ ಅಕ್ರಮವಾಗಿ ಮಾದಕ ವಸ್ತು ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಮೂವರ ಮೇಲೂ ಪೋಲೀಸರು ಪ್ರಕರಣ ದಾಖಲು ಮಾಡಿ ಅವರಿಂದ 7 ಸಾವಿರ ರೂ.ಗಳ ಮೌಲ್ಯದ 70 ಗ್ರಾಂ ತೂಕದ ಚರಸ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ನಂಜನಗೂಡು ಡಿವೈಎಸ್ ಪಿ ರಘು ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೋಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.