ಬೆಂಗಳೂರು, ನ.11- ತನ್ನನ್ನು ಹಿಯಾಳಿಸುತ್ತಿದ್ದರೆಂಬ ಕಾರಣಕ್ಕೆ ಇಬ್ಬರು ಕ್ಲೀನರ್ಗಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಬಗ್ಗೆ ಯಾವುದೇ ಸಾಕ್ಷ್ಯಾದಾರಗಳಿಲ್ಲದಿದ್ದರೂ 48 ಗಂಟೆಗಳ ಅವಧಿಯಲ್ಲಿ ಕ್ರಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಬಾಗಲೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬನಶಂಕರಿಯ, ಉತ್ತರಹಳ್ಳಿಯ ನೇತಾಜಿ ಸುಭಾಷ್ಚಂದ್ರ ರಸ್ತೆ ನಿವಾಸಿ ಸುರೇಶ್ ಅಲಿಯಾಸ್ ಶಶಿ(35) ಬಂಧಿತ ಜೋಡಿ ಕೊಲೆ ಆರೋಪಿ. ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ 2012ರಲ್ಲಿ ಬಾಲಕಿಯ ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಯತ್ನ ಪ್ರಕರಣದಲ್ಲಿ 2012ರಿಂದ 2024ರ ಜನವರಿವರೆಗೆ ಕಾರಾಗೃಹದಲ್ಲಿದ್ದು, 8 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಈ ಆರೋಪಿ.
ಜೈಲಿನಿಂದ ಹೊರ ಬಂದ ನಂತರ ಸಿಂಗನಹಳ್ಳಿ ಗ್ರಾಮದ ಎಸ್ಆರ್ಎಸ್ ಕಂಪನಿಯ ಬಸ್ ವಾಷಿಂಗ್ ಮತ್ತು ಕ್ಲೀನಿಂಗ್ ಸ್ಥಳದಲ್ಲಿ ಕ್ಲೀನಿಂಗ್ ಕೆಲಸಕ್ಕೆ ಸುರೇಶ್ ಸೇರಿಕೊಂಡಿದ್ದಾನೆ. ಇದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ ಮತ್ತು ಮಂಜುಗೌಡ ಆಗಾಗ್ಗೆ ಸುರೇಶ್ಗೆ ಛೇಡಿಸುತ್ತಿದ್ದರು. ನೀನು ಜೈಲಿನಿಂದ ಬಂದವನು, ನೀನು ಕಳ್ಳ ಎಂದು ಹಿಯಾಳಿಸುತ್ತಿದ್ದುದ್ದನ್ನು ಸುರೇಶ್ ಸಹಿಸುತ್ತಿರಲಿಲ್ಲ. ನ. 8ರಂದು ರಾತ್ರಿ ಶೆಡ್ನಲ್ಲಿ ನಾಗೇಶ್ ಮತ್ತು ಮಂಜೇಗೌಡ ಇದ್ದಾಗ ಸುರೇಶ್ ಸಹ ಇವರೊಂದಿಗೆ ಮದ್ಯ ಸೇವಿಸಿದ್ದಾನೆ.
ಆ ವೇಳೆ ನಾಗೇಶ್ ಮತ್ತು ಮಂಜೇಗೌಡನ ಜೊತೆ ಜಗಳವಾಗಿದೆ. ಅದು ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ರಾಡಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ಆ ಸ್ಥಳದಿಂದ ರಾತ್ರಿಯಿಡೀ ನಡೆದುಕೊಂಡೇ ಸಿಟಿ ಮಾರ್ಕೆಟ್ಗೆ ಬಂದು ತಲೆಮರೆಸಿಕೊಂಡಿದ್ದ.ಶನಿವಾರ ಬೆಳಗ್ಗೆ ಜೋಡಿ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಗಲೂರು ಠಾಣೆ ಪೊಲೀಸರು ಆರೋಪಿ ಬಂಧನಕ್ಕೆ ತಂಡವೊಂದನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದಾರೆ.
ಶೆಡ್ನಲ್ಲಿ ಇವರಿಬ್ಬರ ಜೊತೆ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ನಾಪತ್ತೆಯಾಗಿದ್ದಾನೆ ಎಂಬುವುದು ಪೊಲೀಸರಿಗೆ ಗೊತ್ತಾಗಿದೆ. ಆದರೆ ಈತನ ವಾಸಸ್ಥಳವಾಗಲಿ, ಎಲ್ಲಿಯವನು, ಎಂಬುದು ತಿಳಿಯಲಿಲ್ಲ. ಅಲ್ಲದೆ ಮೊಬೈಲ್ ಸಹ ಬಳಸುತ್ತಿರಲಿಲ್ಲವಾದ್ದರಿಂದ ಆರೋಪಿ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗಿಲ್ಲ.
ಆದರೂ ಸಹ ಈ ಜೋಡಿ ಕೊಲೆಯ ತನಿಖೆಯನ್ನು ಸವಾಲಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದ ತನಿಖಾ ತಂಡಕ್ಕೆ ಆರೋಪಿ ಸಿಟಿ ಮಾರ್ಕೆಟ್ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ಹೋಗಿ ಆರೋಪಿ ಸುರೇಶ್ನನ್ನು ಕೇವಲ 48 ಗಂಟೆಗಳ ಅವಧಿಯಲ್ಲಿ ಬಂಧಿಸುವಲ್ಲಿ ಇನ್ಸ್ಪೆಕ್ಟರ್ ಶಬರೀಶ್ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಈ ಹಿಂದೆ 2010ರಲ್ಲಿ ಸುಬ್ರಹಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ತನ್ನ ಸ್ನೇಹಿತನ ಜೊತೆ ಸೇರಿ ತಲೆ ಮೇಲೆ ಕಲ್ಲು ಹಾಕಿ ಜೋಡಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ನ್ಯಾಯಾಲಯ ಖುಲಾಸೆ ಮಾಡಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.