ಬೆಂಗಳೂರು,ಏ.10- ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿರುವ ಆರೋಪಿ ಸುಳಿವು ಸಿಕ್ಕಿದ್ದು, ಆತ ಸ್ಥಳೀಯ ನಿವಾಸಿ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ಮಾಧ್ಯಮಗಳಲ್ಲಿ ಈ ಘಟನೆ ದೃಶ್ಯಾವಳಿ ಬಿತ್ತರಗೊಂಡ ಹಿನ್ನೆಲೆ ಯಲ್ಲಿ ಆರೋಪಿ ಬೇರೆ ಕಡೆ ಪರಾರಿಯಾಗಿದ್ದಾನೆ ಎಂಬುದು ತಿಳಿದು ಬಂದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಆಗ್ನೇಯ ವಿಭಾಗದ ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು.ಈ ತಂಡಗಳು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಪೊಲೀಸರು ಹುಡುಕುತ್ತಿದ್ದಾರೆಂದು ತಿಳಿದು ನಗರದಿಂದಲೇ ಕಾಲ್ಕಿತ್ತಿದ್ದಾನೆ ಎಂಬುದು ಗೊತ್ತಾಗಿದೆ.
ತನಿಖಾ ತಂಡಗಳ ಪೈಕಿ ಒಂದು ತಂಡ ಆಂದ್ರ ಪ್ರದೇಶಕ್ಕೆ ಮತ್ತೊಂದು ತಂಡ ತಮಿಳುನಾಡಿಗೆ ಹೋಗಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿವೆ. ಉಳಿದ ತಂಡಗಳು ನಗರದೆಲ್ಲೆಡೆ ಶೋಧ ನಡೆಸುತ್ತಿದ್ದು, ಆತನ ಬಂಧನಕ್ಕೆ ಹಗಲುರುಳು ಶ್ರಮಿಸುತ್ತಿವೆ.
ಕಳೆದ ವಾರ ಇಬ್ಬರು ವಿದ್ಯಾರ್ಥಿನಿಯರು ಟೀ ಕುಡಿಯಲೆಂದು ಬೆಳಗಿನ ಜಾವ ಪಿಜಿಯಿಂದ ಹೊರಗೆ ಹೋಗಿ ಟೀ ಕುಡಿದು ಮುಂಜಾನೆ 2 ಗಂಟೆ ಸುಮಾರಿನಲ್ಲಿ ಹಿಂದಿರುಗುತ್ತಿದ್ದಾಗ ಪಿಜಿ ಸಮೀಪವೇ ಹಿಂಬಾಲಿಸಿಕೊಂಡು ಡಿಯೋ ದ್ವಿಚಕ್ರವಾಹನದಲ್ಲೆ ಬಂದ ಆರೋಪಿ ರಸ್ತೆಬದಿ ವಾಹನ ನಿಲುಗಡೆ ಮಾಡಿ ಇವರ ಹಿಂದೆ ಬಂದು ವಿದ್ಯಾರ್ಥಿನಿಯ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.
ಈಗಾಗಲೇ ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿದ್ದು, ಘಟನೆಗೂ ಮುನ್ನ ಆರೋಪಿ ಬಿಟಿಎಂ ಲೇಔಟ್ ಪ್ರದೇಶದಲ್ಲಿ ದ್ವಿಚಕ್ರವಾಹನದಲ್ಲಿ ಸುತ್ತಾಡಿರುವುದನ್ನು ಪತ್ತೆ ಹಚ್ಚಿ ಆ ವಾಹನದ ನೊಂದಣಿ ಸಂಖ್ಯೆಯನ್ನು ಕಲೆ ಹಾಕಿದ್ದು, ಆತನ ಬಂಧನಕ್ಕೆ ಶೋಧ ಮುಂದುವರೆಸಿದ್ದಾರೆ.