ಬೆಂಗಳೂರು, ಮಾ.29– ತನ್ನ ಹೆಂಡತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದಲ್ಲಿ ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಗಿರೀಶ (40) ಬಂಧಿತ ಹಂತಕ. ಈತ ಕೊಲೆಯಾಗಿರುವ ನಾಗಿಯ ಮೂರನೇ ಗಂಡ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಸಮೀಪದ ಬಾಳಂಗಾಡು ಗ್ರಾಮದಲ್ಲಿ ಮೊನ್ನೆ ರಾತ್ರಿ ನಿದ್ರೆಗೆ ಜಾರಿದ್ದಾಗ ತನ್ನ ಪತ್ನಿ ನಾಗಿ(35), ಈಕೆಯ ಎರಡನೇ ಗಂಡನ ಮಗಳು ಕಾವೇರಿ (5) ಹಾಗೂ ಈಕೆಯ ಅಜ್ಜ ಕರಿಯ(75) ಮತ್ತು ಅಜ್ಜಿ ಗೌರಿ(70)ಯವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.
ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಾಗ ನಾಗಿಯ ಮೂರನೇ ಗಂಡ ಗಿರೀಶನಿಂದಲೇ ಕೊಲೆಯಾಗಿರುವುದು ಗೊತ್ತಾಗಿದೆ.
ನಾಗಿಯ ತಾಯಿ ಕೇರಳದಲ್ಲಿ ನೆಲೆಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆತ ಕೇರಳದಲ್ಲಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಒಂದು ತಂಡ ಕೇರಳಕ್ಕೆ ತೆರಳಿ ಅಲ್ಲಿನ ತಲಪುಳ ಎಂಬಲ್ಲಿ ಆತನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ.
ಕೊಲೆಗೆ ಕಾರಣ:
ಪತ್ನಿ ನಾಗಿ ತನ್ನ ಎರಡನೇ ಗಂಡನೊಂದಿಗೆ ಸಂಬಂಧ ಮುಂದುವರೆಸಿದ್ದಾಳೆಂಬ ಅನುಮಾನ ಗಿರೀಶನಿಗೆ ಕಾಡಿತ್ತು. ಇದೇ ವಿಚಾರಕ್ಕೆ ಕುಟುಂಬದಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಕುಟುಂಬದವರೆಲ್ಲರನ್ನೂ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಈ ಪ್ರಕರಣದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಎಸ್ಪಿ ರಾಮರಾಜನ್ ಶ್ಲಾಘಿಸಿದ್ದಾರೆ.