ಬೆಂಗಳೂರು,ಫೆ.26– ಕುಡಿಯಲು ಹಣ ಕೊಡಲಿಲ್ಲವೆಂದು ಬಸ್ ನಿಲ್ದಾಣದಲ್ಲಿ ಮಹಿಳೆಗೆ ಚಾಕುವಿನಿಂದ ಇರಿದಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಾಕು ಇರಿತದಿಂದ ನಾಗಲಕ್ಷ್ಮಿ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಮೊನ್ನೆ ಸಂಜೆ 4 ಗಂಟೆ ಸುಮಾರಿನಲ್ಲಿ ಬಿಳಿಶಿವಾಲೆಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಾಗಲಕ್ಷ್ಮಿ ಅವರು ಹಣ ಎಣಿಸುತ್ತಿದ್ದರು. ಆ ಸಂದರ್ಭದಲ್ಲಿ ಆನಂದ್ ಎಂಬ ವ್ಯಕ್ತಿ ಅವರ ಬಳಿ ಹೋಗಿ ಕುಡಿಯಲು ಹಣ ಕೇಳಿದ್ದಾನೆ.
ನಾಗಲಕ್ಷ್ಮಿ ಅವರು ಹಣ ಕೊಡಲು ನಿರಾಕರಿಸಿದಾಗ ಆನಂದ್ ಚಾಕು ತೆಗೆದುಕೊಂಡು ಬಂದು ಕಿವಿ ಹಾಗೂ ಗಲ್ಲಕ್ಕೆ ಇರಿದು ಪರಾರಿಯಾಗಿದ್ದನು. ಈ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿ ಆನಂದ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.