ಬೆಂಗಳೂರು,ಮಾ.26- ಪ್ರಕರಣವೊಂದರ ತನಿಖೆಯಲ್ಲಿ ಆರೋಪಿಯನ್ನು ಬಂಧಿಸುವ ಕುರಿತಂತೆ ದೂರುದಾರನಿಂದ 4 ಲಕ್ಷ ಲಂಚ ಕೇಳಿ 2 ಲಕ್ಷ ಮುಂಗಡ ಹಣ ಪಡೆಯುತ್ತಿದ್ದ ಸೈಬರ್ ಅಪರಾಧ ವಿಭಾಗದ ಈಶಾನ್ಯ ವಿಭಾಗದ ಎಸಿಪಿ ಮತ್ತು ಎಎಸ್‌ಐ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಧುಸೂದನ ಎಂಬ ಸಾಫ್ಟ್ ವೇರ್ ಇಂಜಿನಿಯರ್‌ವೊಬ್ಬರು ಕಂಪನಿಯೊಂದನ್ನು ನಡೆಸುತ್ತಿದ್ದು, ಸೈಬರ್ ಅಪರಾಧ ಕುರಿತಂತೆ ಪ್ರಕರಣ ದಾಖಲಿಸಿ ಆರೋಪಿ ಬಂಧ ನಕ್ಕೆ ದೂರು ನೀಡಿದ್ದರು.
ಈ ಸಂಬಂಧ ಈಶಾನ್ಯ ವಿಭಾಗದ ಎಸಿಪಿ ಎಸ್‌ಆರ್ ತನ್ವೀರ್ ಅವರು 4 ಲಕ್ಷ ರೂ. ಲಂಚ ಕೇಳಿದ್ದರು. ಮುಂಗಡವಾಗಿ 2 ಲಕ್ಷ ನೀಡುವಂತೆ ದೂರುದಾರನಿಗೆ ಹೇಳಿದ್ದರು. ಈ ಸಂಬಂಧ ದೂರುದಾರರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್‌ಪಿ ಡ್ರಿಲ್ ಕೆ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ಡಿಎಸ್‌ಪಿ ತಿಪ್ಪೇಸ್ವಾಮಿ, ಇನ್ಸ್ ಫೆಕ್ಟರ್ ಪ್ರಶಾಂತ್, ಕೃಷ್ಣಮೂರ್ತಿ ಅವರ ತಂಡ ಕೈಗೊಂಡ ಕಾರ್ಯಾಚರಣೆಯಲ್ಲಿ 2ಲಕ್ಷ ಲಂಚ ಪಡೆಯುತ್ತಿದ್ದ ಎಸಿಪಿ ತನ್ವೀರ್ ಮತ್ತು ಎಎಸ್‌ಐ ಕೃಷ್ಣಮೂರ್ತಿ ಅವರನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇಬ್ಬರೂ ಅಧಿಕಾರಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆಯೆಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಸೈಬರ್ ಅಪರಾಧ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದು ಭಾರಿ ಸಂಚಲನ ಸೃಷ್ಠಿಸಿದೆ.