Friday, November 22, 2024
Homeರಾಜ್ಯಡೆಂಘೀ ಚಿಕಿತ್ಸೆಗೆ ಹೆಚ್ಚಿನ ದರ ಪಡೆದರೆ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಗುಂಡೂರಾವ್

ಡೆಂಘೀ ಚಿಕಿತ್ಸೆಗೆ ಹೆಚ್ಚಿನ ದರ ಪಡೆದರೆ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಗುಂಡೂರಾವ್

ಬೆಂಗಳೂರು,ಜು.15- ಡೆಂಘೀ ಪ್ರಕರಣಗಳಿಗೆ ಖಾಸಗಿ ಆಸ್ಪತ್ರೆಯವರು ಹೆಚ್ಚಿನ ದರ ತೆಗೆದುಕೊಂಡರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸದಸ್ಯ ಧನಂಜಯ್ಯ ಸರ್ಜಿ ಪರವಾಗಿ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ. ಇದನ್ನು ಮೀರಿ ಸಾರ್ವಜನಿಕರಿಂದ ಹೆಚ್ಚಿನ ಹಣ ತೆಗೆದುಕೊಂಡರೆ ಕಾನೂನು ಕ್ರಮ ಖಚಿತ ಎಂದು ಎಚ್ಚರಿಕೆ ಕೊಟ್ಟರು.

ಡೆಂಘೀ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕೋವಿಡ್ ಮಾದರಿಯಲ್ಲಿ ನಿಯಂತ್ರಣ ಮಾಡಬೇಕೆಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಜೊತೆಗೆ ಟಾಸ್ಕ್ಫೋರ್ಸ್ ಕೂಡ ರಚನೆ ಮಾಡಲಾಗಿದೆ ಎಂದು ವಿವರಿಸಿದರು.

ಎರಡಕ್ಕಿಂತ ಹೆಚ್ಚು ಡೆಂಘೀ ಪ್ರಕರಣಗಳು ಕಂಡುಬಂದರೆ ಅದನ್ನು ಹಾಟ್ಸ್ಪಾಟ್ ಎಂದು ಘೋಷಣೆ ಮಾಡಲಾಗುವುದು. ಅಲ್ಲದೆ ಈ ಪ್ರದೇಶದಲ್ಲಿ ಹೆಚ್ಚಿನ ಡೆಂಘೀ ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಈಗಾಗಲೇ ಸಮಾರೋಪಾದಿಯಲ್ಲಿ ಕೆಲಸಗಳನ್ನು ಕೈಗೊಂಡಿದ್ದಾರೆ ಎಂದರು.

ಎರಡು ಅಥವಾ ಮೂರಕ್ಕಿಂತ ಡೆಂಘೀ ಪ್ರಕರಣಗಳು ಕಾಣಿಸಿಕೊಂಡರೆ ಕ್ಲಿನಿಕ್ಗಳನ್ನು ತೆರೆಯಲು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಾವು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಉತ್ತರ ಭಾರತದಲ್ಲಿ ಈ ಪ್ರಕರಣಗಳು ಕಡಿಮೆ ಇದೆ.

ಮಳೆಗಾಲವಾಗಿರುವುದರಿಂದ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸೆಪ್ಟೆಂಬರ್ವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ, ಕಂದಾಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಮೂಲಕ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಸರ್ಕಾರದ ಜೊತೆಗೆ ಶಾಸಕರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

RELATED ARTICLES

Latest News