ಬೆಂಗಳೂರು,ಡಿ.1– ಚಂದ್ರಶೇಖರ್ ಸ್ವಾಮೀಜಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಂಗಲ್ ಹನುಮಂತಯ್ಯ ಅವರ ಪುಣ್ಯಸರಣೆ ಅಂಗವಾಗಿ ವಿಧಾನಸೌಧದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅನಂತರ ನನಗೆ ಬೇರೆ ದಾರಿ ಇಲ್ಲದೆ ಅಹಿಂದ ಸಂಘಟನೆ ಮಾಡಿದ್ದೆ. ಈಗ ಹಾಸನದಲ್ಲಿ ಸಮಾವೇಶ ನಡೆಸುತ್ತಿರುವುದರ ಹಿಂದೆ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ಇದೆ ಎಂದರು.
ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಆಹ್ವಾನಿಸಲಾಗಿದೆ. ಪಕ್ಷ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಹೇಳಿದರು.
ಹಿಂದೆ ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿದಾಗ ನಾನು ಏನು ಮಾಡಬೇಕಿತ್ತು? ವಿರೋಧ ಮಾಡುವ ಸಲುವಾಗಿ ಅಹಿಂದ ಸಂಘಟನೆ ಮಾಡಬೇಕಾಯಿತು. ಜಾತ್ಯತೀತ ಜನತಾದಳ ಪಕ್ಷ ಕಟ್ಟಿದವರು ನಾವು. ಈಗ ಕೋಮುವಾದಿಗಳ ಜೊತೆ ಸೇರಿದ ಮೇಲೆ ಜೆಡಿಎಸ್ ಜಾತ್ಯತೀತವಾಗಿ ಉಳಿದಿದೆಯೇ? ಎಂದು ಕಿಡಿಕಾರಿದರು.
ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ಸೇರ್ಪಡೆಯಾಗಿದೆ. ಸುಪ್ರೀಂಕೋರ್ಟ್ ಸಂವಿಧಾನದಲ್ಲಿ ಜಾತ್ಯತೀತತೆ ಇರಬೇಕು ಎಂದು ಅಭಿಪ್ರಾಯಪಟ್ಟಿದೆ. ಜೆಡಿಎಸ್ನಲ್ಲಿ ಅದು ಉಳಿದಿಲ್ಲ ಎಂದರು.
ಜೆಡಿಎಸ್ ಪಕ್ಷ ಸ್ಥಾಪನೆಯಾದಾಗ ಕುಮಾರಸ್ವಾಮಿ ಇರಲಿಲ್ಲ. ಹೀಗಾಗಿ ಅದರ ಹಿನ್ನೆಲೆ ಅವರಿಗೆ ಗೊತ್ತಿಲ್ಲ. ನಾನು, ದೇವೇಗೌಡರು, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಸಿ.ಎಂ.ಇಬ್ರಾಹಿಂ, ವೆಂಕಟೇಶ್, ಲಕ್ಷ್ಮೀ ಸಾಗರ್ ಸೇರಿ ಪಕ್ಷ ಸ್ಥಾಪನೆ ಮಾಡಿದೆವು. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ನಾನು ರಾಜ್ಯ ಅಧ್ಯಕ್ಷನಾಗಿದ್ದೆ ಎಂದು ವಿವರಿಸಿದರು.
ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತ :
ಸ್ವಾತಂತ್ರ್ಯಾ ನಂತರ ಎರಡನೇ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರ ಆಡಳಿತ ಆದರ್ಶಪ್ರಾಯವಾಗಿದ್ದು, ಸರ್ವತ್ರ ಮಾದರಿ. ಇಂದು ಅವರ ಪುಣ್ಯಸರಣೆ ದಿನ. ನಾನು ಮುಖ್ಯಮಂತ್ರಿಯಾದಾಗಿನಿಂದಲೂ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸುತ್ತಿದ್ದೇನೆ. ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರರು. ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವರಾಗಿ ಸುಭಿಕ್ಷ ಆಡಳಿತ ನಡೆಸಿದ್ದರು. ವಿಧಾನಸೌಧವನ್ನು ಕಟ್ಟಿಸಿ, ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದರು ಎಂದರು.
ಕನ್ನಡ ಮಾತನಾಡುವವರೆಲ್ಲಾ ಒಂದು ಆಡಳಿತ ವ್ಯವಸ್ಥೆಯಲ್ಲಿರಬೇಕು ಎಂದು ನಂಬಿದ್ದ ಅವರು ಏಕೀಕರಣಕ್ಕಾಗಿ ಕಟಿಬದ್ಧರಾಗಿ ಕೆಲಸ ಮಾಡಿದರು. ನೆಹರೂ ಅವರ ಜೊತೆ ಉತ್ತಮ ಸಂಬಂಧ ಹೊಂದಲು ನೆಹರೂ ಪ್ರಧಾನಿಯಾಗಿದ್ದಾಗ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿ ಅನ್ಯೋನ್ಯವಾಗಿ ಕೆಲಸ ಮಾಡುತ್ತ ದೇಶ ಹಾಗೂ ನಾಡಿನ ಅಭಿವೃದ್ಧಿಗೆ ಪರಸ್ಪರ ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಾವು ನಡೆಯುತ್ತೇವೆ ಎಂದು ಹೇಳಿದರು.