ಬೆಂಗಳೂರು,ಜ.1- ಹಕ್ಕುಚ್ಯುತಿ ಉಲ್ಲಂಘನೆ ಮಾಡಿ ನನ್ನನ್ನು ಕಾನೂನುಬಾಹಿರವಾಗಿ ಬಂಧಿಸಿರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಆಗಲೇಬೇಕು. ಇದರಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ವಿಧಾನಪರಿಷತ್ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಮತ್ತೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಅಧಿಕಾರಿಗಳ ವರ್ತನೆ ಸಂವಿಧಾನ ಬದ್ಧವಾಗಿಲ್ಲ. ಪೊಲೀಸರ ವಿರುದ್ಧ ಕ್ರಮ ಆಗಲೇಬೇಕು. ನಾನು ರಾಜ್ಯಪಾಲರಿಗೆ ಎಲ್ಲವನ್ನೂ ದೂರಿನ ಮೂಲಕ ಹೇಳಿದ್ದೇನೆ. ಯಾರಿಂದ ಬೆದರಿಕೆ ಇದೆ ಅಂತಲೂ ಹೇಳಿದ್ದೇನೆ. ಜನ, ಕಾರ್ಯಕರ್ತರು ನನ್ನ ಜತೆ ಇದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ಎದುರಿಸುತ್ತೇವೆ ಎಂದು ಹೇಳಿದರು.
ನನ್ನ ದೂರಿನ ಮೇಲೆ ಇನ್ನೂ ಎಫ್ಐಆರ್ ಹಾಕಿಲ್ಲ.ಸಿಐಡಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ನಾನು ಕೊಟ್ಟ ದೂರು ಬಂದೇ ಇಲ್ಲ ಎಂದು ಹೇಳುತ್ತಿದ್ದಾರೆ. ಇದು ಸಂವಿಧಾನಕ್ಕೆ ಎಸಗಿದ ಅಪಚಾರ ಅಲ್ಲವೇ ಎಂದು ಪ್ರಶ್ನಿಸಿದ ರವಿ, ಸಚಿವೆ ಲಕ್ಷಿ ಹೆಬ್ಬಾಳ್ಕರ್ ದೂರು, ಅಪರಿಚಿತರಿಂದಲೇ ಕೊಡಿಸಲಾಗಿತ್ತು. ನನ್ನ ಮೇಲೆ ಹಲ್ಲೆ ಮಾಡಿದವ ವಿರುದ್ಧ ದೂರು ಮಾತ್ರ ನಮಗೆ ಕೊಟ್ಟಿದ್ದಾರೆ ಎಂದು ಸಿಐಡಿಯವರು ಹೇಳುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸಿಐಡಿ ಮಹಜರ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡೀ ಪ್ರಕರಣ ಮೂರು ಭಾಗವಾಗಿ ನೋಡಬೇಕು. ಸದನದ ಒಳಗೆ ನಡೆದ ಘಟನೆಗೆ ಸಭಾಪತಿಯವರೇ ಸುಪ್ರೀಮ್. ಸಂವಿಧಾನದ ಪ್ರಕಾರ ಸಭಾಪತಿ, ಸಭಾಧ್ಯಕ್ಷರಿಗೆ ವಿಶೇಷ ಅಧಿಕಾರ ಇದೆ.ಮಹಜರ್ ಬಗ್ಗೆ ಸಭಾಪತಿ, ಸಭಾಧ್ಯಕ್ಷರೇ ತೀರ್ಮಾನ ತೆಗೆದುಕೊಳ್ಳಬೇಕು. ಇನ್ನೊಂದು ಪೊಲೀಸ್ ದೌರ್ಜನ್ಯ, ಸದನದ ಹೊರಗೆ ನಡೆದ ಘಟನೆ ಎಂದರು.
ಸಿಎಂ ಆದಿಯಾಗಿ ಬಹುತೇಕ ಸಚಿವರು ಒಂದಲ್ಲ ಒಂದು ರೀತಿಯಲ್ಲಿ ಹಗರಣಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಉಳಿದವರಿಗೆ ಅನ್ವಯ ಆಗುವುದು ತಮಗೆ ಅನ್ವಯ ಆಗಲ್ಲ ಎನ್ನುವವರು ಈಶ್ವರಪ್ಪ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಏನು ಹೇಳಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ಸಚಿನ್ ಪಾಂಚಾಳ್ ಸಾವಿಗೂ ಪ್ರಿಯಾಂಕ್ ಖರ್ಗೆಯವರೇ ಹೊಣೆ ಆಗಬೇಕು ತಾನೇ? ಎಂದು ಪ್ರಶ್ನಿಸಿದರು.
ಈ ಸರ್ಕಾರ ಪ್ರಾಮಾಣಿಕ ಅಧಿಕಾರಿಗಳಿಗೆ ಆತಹತ್ಯೆ ಭಾಗ್ಯ ಕೊಟ್ಟಿದೆ. ಅಧಿಕಾರಿಗಳು, ಸರ್ಕಾರಿ ನೌಕರರು ಗುತ್ತಿಗೆದಾರರು ಆತಹತ್ಯೆ ಮಾಡಿಕೊಂಡಿದ್ದಾರೆ. ಆರೋಗ್ಯ ಖಾತೆಗೆ ಅನಾರೋಗ್ಯ ಬಡಿದಿದೆ, ಬಾಣಂತಿಯರ, ಶಿಶುಗಳ ಸರಣಿ ಸಾವು ನಿಂತಿಲ್ಲ. ಜೀವರಕ್ಷಕ ಔಷಧಗಳೇ ಕಳಪೆ, ಇದು ಆಘಾತಕಾರಿ ವಿಚಾರ ಎಂದು ಗುಡುಗಿದರು.
ಒಂದೊಂದು ಜಿಲ್ಲೆಯನ್ನು ಒಬ್ಬೊಬ್ಬರು ರಿಪಬ್ಲಿಕ್ ಮಾಡಿಕೊಂಡಿದ್ದಾರೆ. ಕಲಬುರ್ಗಿ ರಿಪಬ್ಲಿಕ್, ಕನಕಪುರ ರಿಪಬ್ಲಿಕ್, ಬೆಳಗಾವಿ ರಿಪಬ್ಲಿಕ್ ಮಾಡಿಕೊಂಡಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಗೃಹಸಚಿವರ ಪರಮೇಶ್ವರ್ ಅಸಹಾಯಕರಾಗಿದ್ದಾರೆ. ತಮ ಅಸಹಾಯಕ ಪರಿಸ್ಥಿತಿಯನ್ನು ಅವರೇ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಪರಮೇಶ್ವರ್ ಬಗ್ಗೆ ಮಾತಾಡಿ ಅವರನ್ನು ನಾನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ ಎಂದು ಸಿ.ಟಿ.ರವಿ ಹೇಳಿದರು.