Thursday, May 15, 2025
Homeರಾಜ್ಯದೇಶ ವಿರೋಧಿ ಪೋಸ್ಟ್‌ಗಳ ಕಡಿವಾಣಕ್ಕೆ ಕ್ರಮ : ಗೃಹಸಚಿವ ಪರಮೇಶ್ವರ್‌

ದೇಶ ವಿರೋಧಿ ಪೋಸ್ಟ್‌ಗಳ ಕಡಿವಾಣಕ್ಕೆ ಕ್ರಮ : ಗೃಹಸಚಿವ ಪರಮೇಶ್ವರ್‌

Action to curb anti-national posts: Home Minister Parameshwara

ಬೆಂಗಳೂರು,ಮೇ.14- ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿ ಪೋಸ್ಟ್‌ಗಳನ್ನು ನಿರ್ಬಂಧಿಸುವ ಸಲುವಾಗಿ ವಿಸ್ತೃತವಾದ ಕಾರ್ಯಯೋಜನೆಯನ್ನು ರೂಪಿಸಲಾ ಗುತ್ತದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಬಟನ್‌ ಒತ್ತಿದಾಕ್ಷಣ ಎಲ್ಲವನ್ನೂ ನಿಲ್ಲಿಸಲಾಗುವುದಿಲ್ಲ. ಪದ್ಧತಿಯ ಅನುಸಾರವೇ ಕ್ರಮ ಕೈಗೊಳ್ಳಬೇಕು. ಇದು ಸಣ್ಣ ವಿಚಾರವಲ್ಲ. ಮೇಲ್ನೋಟಕ್ಕೆ ಹೇಳಿದಷ್ಟು ಸರಳವಲ್ಲ ಎಂದರು.

ವಿದೇಶದಲ್ಲಿ ಕುಳಿತು ಪೋಸ್ಟ್‌ ಮಾಡುತ್ತಾನೆ. ನಾವು ಇಲ್ಲಿ ಕಾನೂನು ಮಾಡಿದಾಕ್ಷಣ ವಿದೇಶದಲ್ಲಿರುವವರನ್ನು ನಿಂದಿಸುವುದು ಸರಿಬರುವುದಿಲ್ಲ. ಈಗಾಗಲೇ ಸೈಬರ್‌ ವಿಭಾಗದ ಪೊಲೀಸ್‌‍ ಮಹಾನಿರ್ದೇಶಕರು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಲಾಗಿದೆ. ನಾವು ಅಪರಾಧಗಳನ್ನು ಪತ್ತೆಹಚ್ಚಲು ಶುರು ಮಾಡಿದಂತೆ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ನಮಗೆ ಸಂಖ್ಯೆ ಮುಖ್ಯವಲ್ಲ. ಇಂತಹುದನ್ನು ನಿಲ್ಲಿಸಬೇಕು ಎಂದರು.

ಅವಹೇಳನ, ಕೋಮುದ್ವೇಷ, ವೈಯಕ್ತಿಕ ಟೀಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕಡಿವಾಣ ಹಾಕಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.ಮಂಗಳೂರಿನ ಸುಹಾಸ್‌‍ಶೆಟ್ಟಿ ಪ್ರಕರಣವನ್ನು ಎನ್‌ಐಎಗೆ ನೀಡುವ ಅಗತ್ಯವಿಲ್ಲ. ಆದರೆ ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನಮಗೆ ಗೊತ್ತಿಲ್ಲ ಎಂದರು.

ಕರಾವಳಿಯ ಉಡುಪಿ, ದ.ಕನ್ನಡ ಜಿಲ್ಲೆಗಳಲ್ಲಿ ಕೋಮು ಚಟುವಟಿಕೆಗಳನ್ನು ನಿಗ್ರಹಿಸಲು ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪಡೆ ರಚನೆಗೆ ಪ್ರಸ್ತಾವನೆ ಬಂದಿದೆ. ಚರ್ಚೆ ಮಾಡಿ 2-3 ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.ಬಿಜೆಪಿಯವರು ಪ್ರಸ್ತಾವನೆ ಕಳುಹಿಸಿರುವುದು ಇಂದು ಬೆಳಿಗ್ಗೆ ನಮಗೆ ತಲುಪಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಸರ್ಕಾರ ಹೊಸದಾಗಿ ಯಾವುದೇ ಗ್ಯಾರಂಟಿ ಮಾಡುವುದಿಲ್ಲ. ಇರುವ ಗ್ಯಾರಂಟಿಗಳನ್ನೇ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.ದೇಶದ ಸಾರ್ವಭೌಮತ್ವ ಮತ್ತು ಐಕ್ಯತೆಯಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನದೇ ಆದ ಭಿನ್ನ ಆಲೋಚನೆಗಳಿರುತ್ತವೆ. ಆದರೆ ದೇಶದ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಸಹಕರಿಸುವ ಅಗತ್ಯವಿದೆ.

ಹೀಗಾಗಿ ನಮ ಭಾರತೀಯ ಯೋಧರು ನಡೆಸಿದ ಸಿಂಧೂರ್‌ ಕಾರ್ಯಾಚರಣೆಗೆ ಬೆಂಬಲವಾಗಿ ಕಾಂಗ್ರೆಸ್‌‍ನಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು. ಅದಕ್ಕೆ ಎಲ್ಲಾ ಪಕ್ಷದವರನ್ನೂ ಆಹ್ವಾನಿಸಿದ್ದೇವೆ. ಬಿಜೆಪಿಯವರೇ ಮೊದಲು ಈ ರೀತಿಯ ಯಾತ್ರೆ ಮಾಡಿದ್ದರೆ ನಾವೂ ಭಾಗವಹಿಸುತ್ತಿದ್ದೆವು ಮತ್ತು ಅದಕ್ಕೆ ಸಹಕಾರ ನೀಡುತ್ತಿದ್ದೆವು. ಈಗ ಅವರು ಪ್ರತ್ಯೇಕವಾಗಿ ಮಾಡುತ್ತಿದ್ದಾರೆ. ನಮ ಆಕ್ಷೇಪಣೆಯಿಲ್ಲ ಎಂದರು.

ಕೇಂದ್ರ ಸರ್ಕಾರದ ಮುನ್ಸೂಚನೆ ಪ್ರಕಾರ, ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿತ್ತು. ಆಗ ಕದನ ವಿರಾಮದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಟ್ವೀಟ್‌ ಬಂದಿತ್ತು. ನಮ ದೇಶದ ಆಂತರಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಅಮೆರಿಕದ ಅಧ್ಯಕ್ಷರು ಹೇಗೆ ಟ್ವೀಟ್‌ ಮಾಡಲು ಸಾಧ್ಯ ಎಂದು ನಾವು ಅಪನಂಬಿಕೆಯಿಂದಲೇ ಸಭೆ ಮುಂದುವರೆಸಿದ್ದೆವು. ಅರ್ಧಗಂಟೆಯ ಒಳಗೆ ಕೇಂದ್ರ ರಕ್ಷಣಾ ಕಾರ್ಯದರ್ಶಿಗಳು ಕರೆ ಮಾಡಿ ಕದನ ವಿರಾಮವಾಗಿದೆ. ಅಮೆರಿಕ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿದರು. ಇದು ದೇಶದ ರಕ್ಷಣೆ ಪ್ರಶ್ನೆ.

ಯಾವುದೇ ರೀತಿಯ ಬೆಳವಣಿಗೆಗಳಾದರೂ ಅದನ್ನು ನಮ ಪ್ರಧಾನಿ ತಿಳಿಸುವುದು ಒಳ್ಳೆಯದು. ಬೇರೆಯವರು ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.ಹಿಂದುಳಿದ ವರ್ಗಗಳ ಆಯೋಗದ ಬಗ್ಗೆ ನಡೆಸಲಾಗಿರುವ ಜಾತಿಜನಗಣತಿ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಿಲ್ಲ. ಎಲ್ಲಾ ಸಚಿವರು ಲಿಖಿತ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. 11 ಜನ ಅಭಿಪ್ರಾಯ ತಿಳಿಸಿದ್ದಾರೆ ಎಂದು ಹೇಳುತ್ತಿರುವುದನ್ನು ನಾನು ಕೇಳಿದ್ದೇನೆ. ಉಳಿದವರು ಹಂತಹಂತವಾಗಿ ಅಭಿಪ್ರಾಯಪಡುತ್ತಾರೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಗಳಲ್ಲಿನ ಒಳಮೀಸಲಾತಿಗೆ ಸಮೀಕ್ಷೆಗಳು ಉತ್ತಮವಾಗಿ ನಡೆಯುತ್ತಿವೆ. ಅಗತ್ಯವಾದರೆ ಕಾಲಾವಧಿಯನ್ನು ವಿಸ್ತರಣೆ ಮಾಡುವ ಬಗ್ಗೆ ಆಯೋಗ ತೀರ್ಮಾನ ತೆಗೆದುಕೊಳ್ಳುತ್ತದೆ. ಗ್ರಾಮೀಣ ಭಾಗದಲ್ಲಿ ನಮ ಮನೆಗೂ ಬಂದು ಸಮೀಕ್ಷೆ ಮಾಡಿದ್ದಾರೆ. ನಗರ ಪ್ರದೇಶದಲ್ಲಿ ಕಡಿಮೆ ಇರಬಹುದು ಎಂದು ಹೇಳಿದರು.

RELATED ARTICLES

Latest News