ಹೈದ್ರಾಬಾದ್, ಡಿ.13- ಪುಷ್ಪಾ 2 ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪುಷ್ಪಾ 2 ಚಿತ್ರದ ಪ್ರೀಮಿಯರ್ ಶೋವನ್ನು ಹೈದ್ರಾಬಾದ್ ನ ಸಂಧ್ಯಾ ಚಿತ್ರಮಂದಿರದಲ್ಲಿ ಹಮಿಕೊಳ್ಳಲಾಗಿತ್ತು. ಈ ವೇಳೆ ತಮ ನೆಚ್ಚಿನ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತಕ್ಕೆ ಮಹಿಳೆ ಒಬ್ಬರು ಸಾವನ್ನಪ್ಪಿ, ಆತನ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಈ ಪ್ರಕರಣಕ್ಕೆ ನಟ ಅಲ್ಲು ಅರ್ಜುನ್ ಅವರು ಸಂತಾಪ ಸೂಚಿಸಿದ್ದರು. ಅಲ್ಲದೆ ಮೃತರ ಕುಟುಂಬಕ್ಕೆ ಚಿತ್ರತಂಡ 25 ಲಕ್ಷ ರೂ.ಗಳ ಪರಿಹಾರ ಘೋಷಿಸಿತ್ತು. ಆದರೆ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಠಾಣೆಯಲ್ಲಿ ನಟ ಅಲ್ಲುಅರ್ಜುನ್, ಚಿತ್ರಮಂದಿರದ ಮಾಲೀಕ, ಬೌನ್ಸರ್ ಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮಗನ ವಿಚಾರಣೆ ನಡೆಸುತ್ತಿರುವ ಸುದ್ದಿ ತಿಳಿದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಕೂಡ ಠಾಣೆಗೆ ಭೇಟಿ ನೀಡಿದ್ದರು. ಸಂಧ್ಯಾ ಚಿತ್ರಮಂದಿರದಲ್ಲಿ ಡಿಸೆಂಬರ್ 5 ರಂದು ಹಮಿಕೊಂಡಿದ್ದ ಪ್ರೀಮಿಯರ್ ಶೋ ವೇಳೆ ಅಗತ್ಯಕ್ಕಿಂತ ಹೆಚ್ಚು ಮಂದಿ ಜಮಾಯಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.