Tuesday, September 17, 2024
Homeರಾಜ್ಯನಿಷ್ಪಕ್ಷಪಾತವಾಗಿ ಮುಡಾ ಹಗರಣದ ತನಿಖೆ ನಡೆಸುವಂತೆ ನಟ ಚೇತನ್‌ ಆಗ್ರಹ

ನಿಷ್ಪಕ್ಷಪಾತವಾಗಿ ಮುಡಾ ಹಗರಣದ ತನಿಖೆ ನಡೆಸುವಂತೆ ನಟ ಚೇತನ್‌ ಆಗ್ರಹ

ಚಿಕ್ಕಬಳ್ಳಾಪುರ,ಜು.16– ಮುಡಾ ಹಗರಣದಲ್ಲಿ ಯಾರ್ಯಾರು ಭಾಗಿಯಾಗಿರುವವರೆಲ್ಲರನ್ನೂ ಪಕ್ಷಾತೀತ ಹಾಗೂ ಪಾರದರ್ಶಕವಾಗಿ ವಿಚಾರಣೆಗೊಳಪಡಿಸಿ ತನಿಖೆ ನಡೆಸಬೇಕು ಎಂದು ನಟ ಚೇತನ್‌ ಆಗ್ರಹಿಸಿದರು.ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣ, ವಾಲೀಕಿ ನಿಗಮದ ಹಗರಣ ಸೇರಿದಂತೆ ಸಾಕಷ್ಟು ಹಗರಣಗಳ ತನಿಖೆ ಮಾಡುವಲ್ಲಿ ಎಸ್‌‍.ಐ.ಟಿ ವಿಲವಾಗುತ್ತಿದೆ. ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಮುಡಾ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ. ಅವರೆಲ್ಲರನ್ನೂ ಪಕ್ಷಾತೀತವಾಗಿ, ಪಾರದರ್ಶಕವಾಗಿ ವಿಚಾರಣೆಗೊಳಪಡಿಸಿ ತನಿಖೆ ನಡೆಸಬೇಕು. ಸಿಎಂ ಸಿದ್ದರಾಮಯ್ಯ ಅದು ಬಿಜೆಪಿ ಅವಧಿಯಲ್ಲಿ ಆಗಿರುವುದು ಎಂದು ಹೇಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ವಿಧಾನಸೌಧದ ಮುಂಭಾಗದಲ್ಲಿ 25 ಅಡಿ ಉದ್ದದ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿರುವುದು ಮೌಢ್ಯದ ಪ್ರತೀಕ. ಇದು ವೈಜ್ಞಾನಿಕ ಮನಸ್ಥಿತಿಯನ್ನು ಹೋಗಲಾಡಿಸುವ ಪ್ರಯತ್ನ ಇದನ್ನು ಎಲ್ಲರೂ ಖಂಡಿಸಬೇಕು ಎಂದ ಅವರು ತನಿಖಾ ಸಂಸ್ಥೆಗಳು ಸರ್ಕಾರದ ತಾಳಕ್ಕೆ ಕುಣಿಯುತ್ತಿವೆ.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಗರಣಗಳು ಹೊರಬರಬೇಕು. ರಾಜ್ಯದ ಕುರಿ ಕಳ್ಳತನ ಹೆಚ್ಚುತ್ತಿರುವ ಕಾರಣ ಕುರಿಗಾಹಿಗಳು ಬಂದೂಕು ವಿತರಣೆ ಮಾಡುವ ಕುರಿತು ಸರ್ಕಾರ ಬಹಳ ದಿನಗಳಿಂದ ಚಿಂತನೆ ನಡೆಸುತ್ತಿದೆ. ಇದೂ ಸಹ ಸರಿಯಾದ ಕ್ರಮವಲ್ಲ. ಇದು ಸಮಾಜದ ಶಾಂತಿ, ಸುರಕ್ಷತೆಗೆ ಹಾನಿಕಾರಕ. ಇದಕ್ಕೆ ಬದಲಾಗಿ ಪೊಲೀಸ್‌‍ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ. ನೀವು ಬಂದೂಕು ಕೊಡುತ್ತಿರುವುದು ರಕ್ಷಣೆಗೆ ಅಲ್ಲ. ಮನುಷ್ಯರ ನಡುವಿನ ಸಂಘರ್ಷಕ್ಕೆ ದಾರಿಯಾಗಲಿದೆ ಎಂದು ಹೇಳಿದರು.

ದೇಶದಲ್ಲಿ ಅರಣ್ಯ ಕಬಳಿಕೆ ಹೆಚ್ಚಾಗಿದೆ. ಅರಣ್ಯಗಳು ಪ್ರಪಂಚದ ಶ್ವಾಸಕೋಶಗಳಿದ್ದಂತೆ. ಗೋಮಾಳ ಜಾಗವನ್ನು ಕೈಗಾರಿಕೆ ಮತ್ತು ಭೂ ಮಾಲೀಕರು ಅತಿಕ್ರಮಣ ಮಾಡುತ್ತಿದ್ದಾರೆ. ಪ್ರಾಣಿ ಪಕ್ಷಿಗಳ ಉಳಿವಿಗಾಗಿ, ಧನ, ಕರು, ಕುರಿ ಮೇಕೆಗಳ ಮೇವಿಗಾಗಿ ಗೋಮಾಳಗಳ ರಕ್ಷಣೆ ಆಗಬೇಕಿದೆ ಎಂದರು.

ಅಹಿಂದ ಒಕ್ಕೂಟಗಳ ಅಧ್ಯಕ್ಷ, ಹೈಕೋರ್ಟ್‌ ವಕೀಲ ಹರಿರಾಂ ಮಾತನಾಡಿ, ಕಾಂಗ್ರೆಸ್‌‍ ಸರ್ಕಾರ ಗ್ಯಾರಂಟಿಗಳಿಗಾಗಿ ಬೇರೆ ಮಾರ್ಗ ಅನುಸರಿಸಬಹುದು ಎಂದು ನಾವು ಭಾವಿಸ್ದೆಿವು. ಆದರೆ, ದಲಿತರ ಜೇಬನ್ನು ಕದಿಯುತ್ತಿರುವ 420 ಕಾಂಗ್ರೆಸ್‌‍ ಎಂದು ನಾವು ಊಹಿಸಿರಲಿಲ್ಲ. ದಲಿತರ ಎಸ್ಸಿಪಿ – ಟಿಎಸ್ಪಿ ಹಣವನ್ನು ಗ್ಯಾರಂಟಿಗಳ ಅನುಷ್ಟಾನಕ್ಕೆ ಬಳಸಿದೆ. ಕಳೆದ 9 ವರ್ಷಗಳಲ್ಲಿ ಸುಮಾರು 75 ಸಾವಿರ ಕೋಟಿ ದಲಿತರ ಹಣ ದುರ್ಬಳಕೆ ಆಗಿದೆ. ನಿಗಮಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ದಲಿತರ ನಿಯೋಗ ಇದೆಲ್ಲವನ್ನೂ ಪ್ರಶ್ನೆ ಮಾಡಲು ಹೋದಾಗ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕಿಡಿಕಾರಿದರು.

ಪಿ.ಟಿ.ಸಿ.ಎಲ್‌ ಕಾಯ್ದೆಯ ಪರಿಣಾಮ ದಲಿತರು ಭೂಮಿ ಕಳೆದುಕೊಂಡರು. ಅಧಿಕಾರಿಗಳು ದಲಿತರ ವಿರುದ್ಧವಾಗಿ ಆದೇಶ ಮಾಡುತ್ತಿದ್ದಾರೆ. ಎಸಿ, ಡಿಸಿಗಳನ್ನು ನಿಯಂತ್ರಣ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅವರನ್ನ ರಕ್ಷಣೆ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗುತ್ತಿದೆ ಎಂದು ಗುಡುಗಿದರು.

ಭೂಮಿ ಮಂಜೂರು ಸಮಿತಿ ಅಧ್ಯಕ್ಷರಾಗಿರುವ ಶಾಸಕರ ಸಂಬಂಧಿಯೊಬ್ಬರು 150 ಕೋಟಿ ಬೆಲೆಬಾಳುವ ಜಮೀನನ್ನು ದಲಿತರ ವಿರುದ್ಧವಾಗಿ ಆದೇಶ ಮಾಡಿದ್ದಾರೆ. ಜನಪ್ರತಿನಿಧಿಗಳಷ್ಟೇ ಅಲ್ಲ, ಅವರ ಕೆಳಗಿನ ಅಧಿಕಾರಿ ವರ್ಗವೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಂತವರನ್ನು ಕಾಪಾಡುವ ಕೆಲಸಕ್ಕೆ ಸರಕಾರ ಮುಂದಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಪರಿವರ್ತನ ಸಂಘ ರಾಜ್ಯಾಧ್ಯಕ್ಷರಾದ ಹರಿರಾಮ್‌ ನಾಗಾರ್ಜುನ, ವಕೀಲ ಮುನಿರಾಜು, ಅಭಿಲಾಶ್‌, ನಾಗಾರ್ಜುನ, ಸುಬ್ಬು ಇದ್ದರು.

RELATED ARTICLES

Latest News