Wednesday, October 30, 2024
Homeರಾಜ್ಯBREAKING : ಕೊನೆಗೂ ನಟ ದರ್ಶನ್‌ಗೆ ಜಾಮೀನು ಮಂಜೂರು, ಜೈಲಿನಿಂದ ಇಂದೇ ಬಿಡುಗಡೆ

BREAKING : ಕೊನೆಗೂ ನಟ ದರ್ಶನ್‌ಗೆ ಜಾಮೀನು ಮಂಜೂರು, ಜೈಲಿನಿಂದ ಇಂದೇ ಬಿಡುಗಡೆ

Actor Darshan Thoogudeepa gets Interim Baill

ಬೆಂಗಳೂರು,ಅ.30- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ನಟ ದರ್ಶನ್‌ಗೆ ಚಿಕಿತ್ಸೆ ಪಡೆಯಲು ಹೈಕೋರ್ಟ್‌ ಆರು ವಾರಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಜೂ.11ರಂದು ಮೈಸೂರಿನಲ್ಲಿ ಬಂಧನಕ್ಕೊಳಪಟ್ಟಿದ್ದ ದರ್ಶನ್‌ ಅಲ್ಲಿಂದ ಈವರೆಗೆ ಅಂದರೆ 131 ದಿನಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿದ್ದರು. ಇದೀಗ ಹೈಕೋರ್ಟ್‌ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ್ದು, ಬಹುತೇಕ ಸಂಜೆಯೊಳಗೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ವಾದ-ವಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್‌‍.ವಿಶ್ವಜೀತ್‌ ಶೆಟ್ಟಿ ಅವರ ಪೀಠ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತು.

ದರ್ಶನ್‌ ಅವರ ಪಾಸ್‌‍ಪೋರ್ಟ್‌ನ್ನು ನ್ಯಾಯಾಲಯಕ್ಕೆ ತಕ್ಷಣವೇ ಒಪ್ಪಿಸುವುದು, ಅವರು ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು, ಒಂದು ವಾರದ ಚಿಕಿತ್ಸಾ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತು.
ನ್ಯಾಯಾಲಯದ ಆದೇಶದ ಪ್ರತಿಗಳನ್ನು ಬಳ್ಳಾರಿ ಜೈಲಿನ ಅಧೀಕ್ಷಕರಿಗೆ ಸಲ್ಲಿಸಿದ ಬಳಿಕ ಬಿಡುಗಡೆಯಾಗಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ದರ್ಶನ್‌ ಹಾಗೂ ಇತರ ಆರೋಪಿಗಳನ್ನು ಬೆಂಗಳೂರಿನ ವಿಜಯನಗರ ಪೊಲೀಸ್‌‍ ಠಾಣೆ ಎಸಿಪಿ ಚಂದನ್‌ ನೇತೃತ್ವದ ತಂಡ ಮೈಸೂರಿನಲ್ಲಿ ಬಂಧಿಸಿತ್ತು. 11 ದಿನಗಳ ಕಾಲ ಪೊಲೀಸರ ವಶದಲ್ಲಿದ್ದ ಅವರನ್ನು ವಿಚಾರಣೆ ನಡೆಸಿದ ಬಳಿಕ ಜೂ.22ಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್‌ ಸಿಗರೇಟ್‌ ಸೇದಿದ್ದು ಹಾಗೂ ವಾಟ್ಸಪ್‌ನಲ್ಲಿ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. 69 ದಿನಗಳ ನಂತರ ದರ್ಶನ್‌ ಅವರನ್ನು ಬಳ್ಳಾರಿ ಹಾಗೂ ಪ್ರಕರಣದ ಇತರೆ ಆರೋಪಿಗಳನ್ನು ತುಮಕೂರು, ಕಲಬುರಗಿ, ಮೈಸೂರು ಸೇರಿದಂತೆ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು.

ಇದಕ್ಕೂ ಮುನ್ನ ಮಂಗಳವಾರ ದರ್ಶನ್‌ ಪರ ವಕೀಲ ಸಿ.ಬಿ.ನಾಗೇಶ್‌ ವಾದ ಮಂಡಿಸಿ ತಮ ಕಕ್ಷಿದಾರರಿಗೆ ಆರೋಗ್ಯದ ಸಮಸ್ಯೆ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿದ್ದರು.

ದರ್ಶನ್‌ ಅವರು ಬೆನ್ನುಹುರಿ/ನರದ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕೆ ಸಾಂಪ್ರದಾಯಿಕ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಈಗ ಅವರಿಗೆ ಪಾದದಲ್ಲಿ ಜೋಮು ಕಾಣಿಸುತ್ತಿದೆ, ಇದು ಮುಂದುವರಿದರೆ ಮೂತ್ರ ಸಮಸ್ಯೆ ಉಂಟಾಗಲಿದೆ. ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಲಿದ್ದಾರೆ ಎಂದು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞ ವಿಶ್ವನಾಥ್‌ ವರದಿ ನೀಡಿದ್ದರಿಂದ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು.

ದರ್ಶನ್‌ ಈಗಾಗಲೇ ಎರಡು ಬಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಾದ ಅಪೊಲೊದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತಮದೇ ಖರ್ಚಿನಲ್ಲಿ ಈಗಲೂ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌, ನ್ಯಾಯಾಲಯವು ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ರಚಿಸಿ, ಅವರು ನೀಡುವ ವರದಿಯನ್ನು ಆಧರಿಸಿ ದರ್ಶನ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು. ಸುಪ್ರೀಂ ಕೋರ್ಟ್‌ ಸಹ ಹಲವು ಪ್ರಕರಣಗಳಲ್ಲಿ ವೈದ್ಯಕೀಯ ಮಂಡಳಿಯ ಶಿಫಾರಸ್ಸು ಆಧರಿಸಿ, ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ.

ದರ್ಶನ್‌ ಅವರು ಬೆಂಗಳೂರಿಗೆ ಬಂದು ಇಲ್ಲಿ ವೈದ್ಯಕೀಯ ಮಂಡಳಿಯ ತಜ್ಞರ ತಪಾಸಣೆಗೆ ಒಳಗಾಗಲಿ. ವೈದ್ಯರು ಏನೆಲ್ಲಾ ಚಿಕಿತ್ಸೆ, ಎಷ್ಟು ದಿನ ಚಿಕಿತ್ಸೆ ಅಗತ್ಯವಿದೆ ಎಂದು ವರದಿ ನೀಡಲಿ. ಇದನ್ನು ಆಧರಿಸಿ ನ್ಯಾಯಾಲಯವು ನಿರ್ಧರಿಸಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಸಿ.ವಿ.ನಾಗೇಶ್‌ ಅವರು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ವರದಿ ನೀಡಿದ್ದಾರೆ. ಇದಕ್ಕೆ ಪ್ರಾಸಿಕ್ಯೂಷನ್‌ ಆಕ್ಷೇಪ ವ್ಯಕ್ತಪಡಿಸುತ್ತಿದೆಯೇ? ಇದಕ್ಕೆ ಏಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ ಎಂಬುದನ್ನು ಹೇಳಬೇಕು ಎಂದು ಆಗ್ರಹಿಸಿದ್ದರು.

ಪೀಠವು ವಿಚಾರಣೆಯ ಒಂದು ಹಂತದಲ್ಲಿ ಸಂವಿಧಾನದ 21ನೇ ವಿಧಿಯಡಿ ಆರೋಗ್ಯ ಹಕ್ಕು ಸೇರ್ಪಡೆಯಾಗಿದೆ ಎಂದು ಪ್ರಾಸಿಕ್ಯೂಷನ್‌ ಕುರಿತು ಹೇಳಿತ್ತು. ಅಲ್ಲದೇ, ವೈದ್ಯಕೀಯ ಮಂಡಳಿಯ ತಪಾಸಣೆಗೆ ಏಕೆ ಒಳಗಾಗಬಾರದು ಎಂದು ಸಿ.ವಿ.ನಾಗೇಶ್‌ ಅವರನ್ನು ಪ್ರಶ್ನಿಸಿತ್ತು.

ಆಗ ನಾಗೇಶ್‌ ಅವರು ಸರ್ಕಾರಿ ಆಸ್ಪತ್ರೆಯ ನರರೋಗ ತಜ್ಞರು ದರ್ಶನ್‌ ಬೆನ್ನು ಹುರಿ ಸಮಸ್ಯೆಗೆ ಸಾಂಪ್ರದಾಯಿಕ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ವಿಧಾನದಲ್ಲಿ ಚಿಕಿತ್ಸೆ ಪಡೆದರೆ ನೋವು ಕೊಂಚ ಕಡಿಮೆಯಾಗಬಹುದೇ ವಿನಾ ಸಂಪೂರ್ಣವಾಗಿ ಗುಣವಾಗುವುದಿಲ್ಲ. ಹೀಗಾಗಿ, ಶಸ್ತ್ರಚಿಕಿತ್ಸೆ ಅಗತ್ಯವಿದೆ. ಅಷ್ಟಕ್ಕೂ ಎಷ್ಟು ದಿನ, ಯಾವೆಲ್ಲಾ ಚಿಕಿತ್ಸೆ ಬೇಕು ಎಂಬುದಕ್ಕೆ ಮೈಸೂರಿನ ಅಪೊಲೊ ಆಸ್ಪತ್ರೆ ವೈದ್ಯರೇ ವರದಿ ನೀಡಬಹುದು ಎಂದು ಹೇಳಿದ್ದರು.

RELATED ARTICLES

Latest News