Friday, November 22, 2024
Homeರಾಜ್ಯಭಾರೀ ಸಂಚಲನ ಸೃಷ್ಟಿಸಿರುವ ದರ್ಶನ್ ರಾಜಾತಿಥ್ಯ ಫೋಟೋ, ವಿಡಿಯೋ

ಭಾರೀ ಸಂಚಲನ ಸೃಷ್ಟಿಸಿರುವ ದರ್ಶನ್ ರಾಜಾತಿಥ್ಯ ಫೋಟೋ, ವಿಡಿಯೋ

ಬೆಂಗಳೂರು,ಆ.26- ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರುವ ಸಂಬಂಧ ಬಿಡುಗಡೆಯಾಗಿರುವ ಫೋಟೋಗಳು, ವಿಡಿಯೋಗಳು ಭಾರೀ ಸಂಚಲನ ಸೃಷ್ಟಿಸಿವೆ.

ಎರಡು ಫೋಟೋಗಳು, ಒಂದು ವಿಡಿಯೋ ಬಹಿರಂಗವಾಗಿವೆ. ಒಂದು ಫೋಟೋದಲ್ಲಿ ದರ್ಶನ್ ರೌಡಿಶೀಟರ್ ವಿಲ್ಸನ್ಗಾರ್ಡನ್ ನಾಗ, ಮತ್ತೊಬ್ಬ ರೌಡಿಶೀಟರ್ ಕುಳ್ಳ ಸೀನ, ಈ ಹಿಂದೆ ತಮ ಮ್ಯಾನೇಜರ್ ಆಗಿದ್ದ ನಾಗರಾಜ್ ಅವರೊಂದಿಗೆ, ಗಾರ್ಡನ್ನಲ್ಲಿ ಮೇಜು ಕುರ್ಚಿಗಳನ್ನು ಹಾಕಿಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಾ, ಸಿಗರೇಟ್ ಸೇದುತ್ತಾ ಮಗ್ನಲ್ಲಿ ಕಾಫಿ ಕುಡಿಯುತ್ತಿರುವುದು ಕಂಡುಬಂದಿದೆ.

ಮತ್ತೊಂದು ಫೋಟೋದಲ್ಲಿ ಜೈಲಿನ ಕೋಣೆಯ ಒಳಗೆ ದರ್ಶನ್ಗೆ ಬೆಡ್ನ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಸಹ ಕೈದಿಯೊಂದಿಗೆ ದರ್ಶನ್ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜೈಲಿನಲ್ಲಿರುವ ರೌಡಿಶೀಟರ್ವೊಬ್ಬ ಹೊರಗಿರುವ ತಮ ಪುತ್ರನಿಗೆ ವಿಡಿಯೋ ಕಾಲ್ ಮಾಡಿದ್ದು, ಅದರಲ್ಲಿ ದರ್ಶನ್ ಮಾತನಾಡಿರುವುದು ಕಂಡುಬಂದಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿನ್ನೆ ಮಧ್ಯಾಹ್ನದಿಂದ ಇಡೀ ರಾತ್ರಿ ಗೃಹ ಇಲಾಖೆ ಹಾಗೂ ಕಾರಾಗೃಹ ಇಲಾಖೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಗೃಹಸಚಿವರನ್ನು ಭೇಟಿ ಮಾಡಿ, ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯ ಮಾಹಿತಿಯನ್ನು ನೀಡಿದ್ದಾರೆ. ಇದೇ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.

ಇತ್ತ ಪೊಲೀಸ್ ಅಧಿಕಾರಿಗಳು ಜೈಲಿಗೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಜೈಲಿಗೆ, ಬುಲೆಟ್, ಗನ್, ಗಾಂಜಾ ಹಾಗೂ ಮೊಬೈಲ್ ಎಗ್ಗಿಲ್ಲದೆ ರವಾನೆಯಾಗುತ್ತಿದೆ ಎಂಬ ಮಾಹಿತಿ ಚರ್ಚೆಯಾಗಿತ್ತು. ಅದರ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆದರೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಕಂಡುಬರಲಿಲ್ಲ ಎಂಬ ಮಾಹಿತಿ ಇತ್ತು.

ಅದಾದ ಬಳಿಕ ಜೈಲಿನಲ್ಲಿ ದರ್ಶನ್ ಅವರ ಐಷರಾಮಿ ಫೋಟೋಗಳು ಬಹಿರಂಗಗೊಂಡಿರುವುದು ಕೆಳಮಟ್ಟದಿಂದ ಮೇಲ್ಪಟ್ಟದವರೆಗೂ ಅಧಿಕಾರಿಗಳು ಶಾಮೀಲಾಗಿರುವ ಆರೋಪಗಳಿಗೆ ಪುಷ್ಟಿ ನೀಡಿವೆ.

ಸುಧಾರಣೆಗೊಳ್ಳದ ದರ್ಶನ್:
ಕಾರಾಗೃಹ ಮತ್ತು ಸುಧಾರಣಾ ಸೇವೆಗಳು ಎಂಬ ಇಲಾಖೆ ಖೈದಿಗಳನ್ನು ಸುಧಾರಣೆ ಮಾಡುವ ಬದಲಾಗಿ ಮತ್ತಷ್ಟು ಖೂಳರನ್ನಾಗಿ ಮಾಡುತ್ತಿರುವುದು ಕಂಡುಬಂದಿದೆ.

ನಟರಾಗಿ ತಮದೇ ಆದ ಅಭಿಮಾನಿ ಬಳಗ ಹೊಂದಿರುವ ದರ್ಶನ್ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗನಂತಹ ರೌಡಿಶೀಟರ್ ಜೊತೆ ಆತೀಯವಾಗಿ ಮಾತನಾಡುತ್ತಿರುವುದು ಸುಧಾರಣೆಯ ಬದಲಾಗಿ ಮತ್ತಷ್ಟು ಅನಾಹುತಗಳಿಗೆ ಅವಕಾಶ ಮಾಡಿಕೊಡಬಹುದೇ ಎಂಬ ಆತಂಕ ಸೃಷ್ಟಿಸಿದೆ.

ಸುಧಾರಣಾ ಇಲಾಖೆಯಲ್ಲಿ ಸುಧಾರಣೆ ಸೇವೆಗಳ ಬದಲಿಗೆ ಜೈಲಿನಲ್ಲಿ ಅಸಾಧಾರಣ ಸೇವೆಗಳನ್ನು ನೀಡುವ ಮೂಲಕ ಕೈದಿಗಳಿಗೆ ಮತ್ತಷ್ಟು ಸಮಾಜಘಾತುಕರನ್ನಾಗಿಸಲು ಕುಮುಕ್ಕು ನೀಡಿದಂತೆ ಕಾಣುತ್ತಿದೆ. ಯಾವುದಾದರೂ ಗಂಭೀರ ಆರೋಪಗಳು ಕೇಳಿಬಂದಾಗ ದಾಳಿ, ತಪಾಸಣೆಯಂತಹ ಹೈಡ್ರಾಮಗಳು ನಡೆಯುತ್ತವೆ.

ಬಳಿಕ ಎಂದಿನಂತೆ ಅಕ್ರಮಗಳು, ಅನೈತಿಕ ಚಟುವಟಿಕೆಗಳಿಗೆ ಜೈಲು ತಾಣವಾಗುತ್ತಿದೆ. ಜೈಲಿನಿಂದಲೇ ಕೊಲೆಗೆ ಸುಫಾರಿ ನೀಡಿರುವಂತಹ ಉದಾರಹಣೆ ಇದೆ ಎಂದು ಹೈಕೋರ್ಟ್ ಮುಂದೆ ವಕೀಲರು ಪ್ರಸ್ತಾಪಿಸಿರುವುದು ಆಘಾತಕಾರಿಯಾಗಿತ್ತು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ನಟ ದರ್ಶನ್ ಪಶ್ಚಾತ್ತಾಪಕ್ಕೀಡಾಗಿ ಪರಿವರ್ತನೆಗೊಳ್ಳಬಹುದು. ಸುಧಾರಣೆಯಾಗಬಹುದು ಎಂಬ ಅಂದಾಜುಗಳಿದ್ದವು. ಆದರೆ ಅದಕ್ಕೆ ತದ್ವಿರುದ್ಧವಾಗಿ ಕುಳ್ಳ ಸೀನ, ವಿಲ್ಸನ್ಗಾರ್ಡನ್ ನಾಗನಂತಹ ರೌಡಿಶೀಟರ್ಗಳೊಂದಿಗೆ ಕಾಣಿಸಿಕೊಂಡಿರುವುದು ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ.

RELATED ARTICLES

Latest News