Thursday, April 24, 2025
Homeಮನರಂಜನೆನಟಸಾರ್ವಭೌಮ ಡಾ.ರಾಜಕುಮಾರ್ ಹುಟ್ಟುಹಬ್ಬ, ವಿಜೃಂಭಣೆಯಿಂದ ಆಚರಿಸಿದ ಅಭಿಮಾನಿಗಳು

ನಟಸಾರ್ವಭೌಮ ಡಾ.ರಾಜಕುಮಾರ್ ಹುಟ್ಟುಹಬ್ಬ, ವಿಜೃಂಭಣೆಯಿಂದ ಆಚರಿಸಿದ ಅಭಿಮಾನಿಗಳು

Actor Dr. Rajkumar's birthday, fans celebrated

ಬೆಂಗಳೂರು,ಏ.24- ಕನ್ನಡ ಸುಪುತ್ರ, ವರನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬ ಎಂದರೆ ಕನ್ನಡಿಗರಿಗೆ, ಕನ್ನಡ ಕಲಾರಸಿಕರಿಗೆ ಎಲ್ಲಿಲ್ಲದ ಸಂತೋಷ. ತಮ್ಮ ಹುಟ್ಟುಹಬ್ಬಗಳಿಗಿಂತ ಹೆಚ್ಚು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಮೇರು ನಟನನ್ನ ಇಂದಿಗೂ ಹೃದಯಗಳಲ್ಲಿ ಆರಾಧಿಸುತ್ತಿದ್ದಾರೆ.

ಇಂದು ನಟಸಾರ್ವಭೌಮನ 96ನೇ ಜನ್ಮದಿನದ ಹೊತ್ತಿನಲ್ಲಿ ಅವರ ಅಭಿಮಾನಿ ದೇವರುಗಳು, ನೇತ್ರದಾನ, ರಕ್ತದಾನ, ಅನ್ನದಾನದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಅವರು ಆಗಲಿದ ದಿನದಿಂದ ಕೆಲ ಅಭಿಮಾನಿಗಳು ಕೂದಲು ಬಿಡದೆ ತಲೆಬೋಳಿಸಿಕೊಂಡು ಓಡಾಡುತ್ತಿದ್ದರೆ, ಮತ್ತೆ ಕೆಲವರು ರಾಜ್ ಅಭಿನಯಿಸಿದ ಅಷ್ಟೂ ಚಿತ್ರಗಳನ್ನು ಕಂಠಪಾಠ ಮಾಡಿ ಹೇಳುತ್ತಾರೆ. ದೇವರ ಮನೆಯಲ್ಲಿ ದೇವರ ಫೋಟೋಗಳು ಜೊತೆ ಅಣ್ಣಾವ್ರ ಫೋಟೋ ಇರಿಸಿ ಪ್ರತಿದಿನ ಪೂಜೆ ಮಾಡುವ ಲಕ್ಷಾಂತರ ಅಭಿಮಾನಿಗಳು ಇಂದಿಗೂ ಇದ್ದಾರೆ.

ನಮ್ಮ ಕನ್ನಡ ನಾಡು, ಭಾಷೆ ಮತ್ತು ಕಲಾಪ್ರಪಂಚದ ರಾಯಭಾರಿ. ಸದಾ ಕನ್ನಡಕ್ಕಾಗಿ ಮಿಡಿಯುತ್ತಿದ್ದ ಹೃದಯ. ಇತಿಹಾಸ ಕಂಡುಕೇಳರಿಯದ ಗೋಕಾಕ್ ಚಳವಳಿಯಂತಹ ದೊಡ್ಡ ಕನ್ನಡಪರ ಚಳವಳಿಯನ್ನು ಮಾಡಿ ಕನ್ನಡಿಗರ ಎದೆಯಲ್ಲಿ ಕನ್ನಡತನವನ್ನು ಎಬ್ಬಿಸಿದ ಕನ್ನಡದ ಸಂತ.

ಕಲಾತಾಯಿಯನ್ನು ವಶೀಕರಣ ಮಾಡಿಕೊಂಡು ಕಲಾ ಸಾಮ್ರಾಜ್ಯವನ್ನು ಆಳಿದ ಕಲಾ ಸಾಮ್ರಾಟ, ಕಲೆಯ ಉತ್ತುಂಗದ ಶಿಖರವೇರಿ ಕಲಾ ಸರಸ್ವತಿಯನ್ನು ದರ್ಶನ ಮಾಡಿ ಬಂದ ಏಕಮಾತ್ರ ನಟ.ನಟರಾಗಿ ಹೇಳುವುದಾದರೆ ನಿರಂತರವಾಗಿ ರೂಢಿಸಿಕೊಂಡಿದ್ದ ಅವರ ಕಲಿಕೆಯ ಮನೋಧರ್ಮ. ಅವರಿಗಿದ್ದ ಅನುಭವದಲ್ಲಿ ಯಾರನ್ನೂ ಬೇಕಾದರೂ ನಿರ್ದೇಶನ ಮಾಡಬಹುದಿತ್ತು. ಅವರಿಗಿದ್ದ ಕಲಿಕೆಯಿಂದ ಯಾವ ದೃಶ್ಯವನ್ನು ಬೇಕಾದರೂ ತಮಗೆ ಬೇಕಾದಂತೆ ಮಾಡಬಹುದಿತ್ತು. ಅವರಿಗಿದ್ದ ಸೌಕರ್ಯಗಳಿಂದ ಏನನ್ನೂ ಬೇಕಾದರೂ ಪಡೆಯಬಹುದಿತ್ತು. ಆದರೆ ರಾಜ್ ಕುಮಾರ್ ಆದ್ಯಾವುದನ್ನೂ ಪಡೆಯಲಿಲ್ಲ.

ಅವರ ಮಾತಿನಲ್ಲೇ ಹೇಳುವುದಾದರೆ ಪಾತ್ರ ನನ್ನ ಚಿತ್ ಮಾಡಬೇಕೇ ಹೊರತು, ನಾನು ಪಾತ್ರವನ್ನು ಚಿತ್ ಮಾಡುವುದಲ್ಲ, ನಟ ಪಾತ್ರವನ್ನು ಸೋಲಿಸಬಾರದು, ಪಾತ್ರವೇ ನಟನನ್ನು ಸೋಲಿಸಬೇಕು. ಪಾತ್ರವೇ ಹಿರಿದಾಗಿ ಕಂಡು, ಆ ಪಾತ್ರಧಾರಿ ಮರೆಯಾಗಬೇಕು. ನಟ. ಪಾತ್ರಕ್ಕೆ ಮಿಗಿಲಾದವನು ಅಲ್ಲ ಎಂಬುದು ಅವರ ನಂಬಿಕೆ. ರಾಜ್ ತೋರಿದ ಈ ಮನೋಧರ್ಮ ಈಗಿನ ನಟರು ಅಳವಡಿಸಿಕೊಂಡರೆ ಸಾಕು.

ರಾಜ್ ಕುಮಾರ್ ಅವರು ಯಾವತ್ತೂ ನನ್ನ ಕೆಲಸ ಅಂದಿಲ್ಲ. ನಮ್ಮ ಕೆಲಸ ಅಂದರು. ಶೂಟಿಂಗ್ ಸೆಟ್ ನಲ್ಲಿ ಎಲ್ಲರ ಜತೆ ಕೂರುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು. ಕಷ್ಟ- ಸುಖ ಕೇಳುತ್ತಿದ್ದರು. ಅನೋನ್ಯತೆ- ಸಂಬಂಧ, ಸ್ನೇಹ ಬೆಳೆಸುತ್ತಿದ್ದರು. ಸಿನಿಮಾ ಒಂದು ತಂಡದ ಸಾಧನೆ ಹೊರತು, ಒಬ್ಬ ವ್ಯಕ್ತಿಯ ಕೆಲಸ ಅಂದುಕೊಂಡಿದ್ದರು. ಅವರಗೆ ಇದ್ದ ಈ ತಂಡದ ಸ್ಫೂರ್ತಿ, ವಿನಮ್ರತೆ, ಶಿಸ್ತು ಈಗಿನ ಚಿತ್ರರಂಗಕ್ಕೆ ಅಣ್ಣಾವ್ರ ಈ ಪಾಠ-ನಡೆ ಕೂಡ ಅತ್ಯಗತ್ಯ.

ರಾಜ್ ಕನ್ನಡ ನಾಡಿನ ಸಾಂಸ್ಕೃತಿಕ ಶಕ್ತಿಯಾಗಿ ಬೆಳೆದುದರ ಹಿಂದೆ ಅವರ ಅಭಿಮಾನಿಗಳ ಬಲವಿದೆ. ವರನಟನ ಮೇಲಿನ ಅಭಿಮಾನವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಹಲವು ಜೀವಗಳು ನಮ್ಮ ನಡುವೆ ಇವೆ. ಇಂದು ರಾಜ್ ಕುಟುಂಬದ ಎಲ್ಲರೂ ಕಂಠೀರವ ಸ್ಟುಡಿಯೋ ಬಳಿಯಿರುವ ಅಣ್ಣಾವ್ರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಕುಟುಂಬದವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News