ಚೆನ್ನೈ,ಫೆ.15- ರಾಜಕಾರಣಿಯಾಗಿ ಬದಲಾಗಿರುವ ತಮಿಳುನಾಡಿನ ಸೂಪರ್ ಸ್ಟಾರ್ ವಿಜಯ್ ಅವರಿಗೆ ವೈ ಗ್ರೇಡ್ ಭದ್ರತೆ ನೀಡಲಾಗಿದೆ. ಗುಪ್ತಚರ ಇಲಾಖೆ ಸಲಹೆ ಮೇರೆಗೆ ತಮಿಳುನಾಡಿನಲ್ಲಿ ತಮಿಳಗೆ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪಿಸಿರುವ ನಟ ಕಮ್ ರಾಜಕಾರಣಿ ವಿಜಯ್ ಅವರಿಗೆ ಗೃಹ ಸಚಿವಾಲಯವು ವೈ ವರ್ಗದ ಭದ್ರತೆಯನ್ನು ನೀಡಿದೆ.
ಫೆಬ್ರವರಿ 13 ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಒಂದು ಅಥವಾ ಇಬ್ಬರು ಕಮಾಂಡೋಗಳೊಂದಿಗೆ ಎಂಟರಿಂದ 11 ಸಿಆರ್ ಪಿಎಫ್ ಸಿಬ್ಬಂದಿ ವೈ ಭದ್ರತಾ ವ್ಯಾಪ್ತಿಯ ಪ್ರಕಾರ ವಿಜಯ್ ಅವರೊಂದಿಗೆ ದಿನದ 24 ಗಂಟೆಯೂ ಇರುತ್ತಾರೆ.
ವಿಜಯ್ ಹೋದ ಕಡೆಗಳೆಲ್ಲಾ ಭಾರೀ ಜನಸಂದಣಿ ಸೇರುವುದರಿಂದ ಮುಂಜಾಗೃತಾ ಕ್ರಮವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಏತನ್ಮಧ್ಯೆ, ತಮಿಳುನಾಡು ಬಿಜೆಪಿ ಮುಖ್ಯಸ್ಥಕೆ ಅಣ್ಣಾಮಲೈ, ಆಡಳಿತಾರೂಢ ಡಿಎಂಕೆ ಸರ್ಕಾರಕ್ಕೆ ಭದ್ರತಾ ವಿವರಗಳನ್ನು ಒದಗಿಸುವ ದೂರದೃಷ್ಟಿ ಇಲ್ಲ ಎಂದು ಆರೋಪಿಸಿದ್ದಾರೆ.
ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಬಿಜೆಪಿಯೊಂದಿಗೆ ಮೈತ್ರಿ ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಕೇಂದ್ರ ಸರ್ಕಾರವು ಪ್ರತಿಪಕ್ಷ ನಾಯಕ ಇಪಿಎಸ್ (ಎಡಪ್ಪಾಡಿ ಕೆ ಪಳನಿಸ್ವಾಮಿ) ಅವರಿಗೆ ಸಿಆರ್‌ಪಿಎಫ್ ಭದ್ರತೆಯನ್ನು ನೀಡಿದೆ ಎಂದು ಅಣ್ಣಾಮಲೈ ಹೇಳಿದರು.
ಅಣ್ಣಾಮಲೈ ಪ್ರಕಾರ, ಅವರಿಗೆ ಜೀವ ಬೆದರಿಕೆ ಇದೆ ಎಂದು ಹಲವಾರು ಏಜೆನ್ಸಿಗಳು ಫ್ಲ್ಯಾಗ್ ಮಾಡಿದ ನಂತರ ಭದ್ರತೆಯನ್ನು ನೀಡಲಾಯಿತು. ಅದೇ ರೀತಿ ಕೇಂದ್ರ ಸರ್ಕಾರ ವಿಜಯ್ ಗೆ ವೈ ಭದ್ರತೆ ನೀಡಿದೆ. ಜನಸಂದಣಿಯ ಕಾರಣ ವಿಜಯ್‌ಗೆ ಸಾರ್ವಜನಿಕರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ.
ರಾಜ್ಯ ಸರ್ಕಾರ ವಿಜಯ್‌ಗೆ ಈ ಭದ್ರತೆಯನ್ನು ಏಕೆ ನೀಡಲಿಲ್ಲ? ಭದ್ರತೆಯ ಬೆದರಿಕೆ ಇರುವಾಗ, ಭಾರಿ ಜನರು ಸೇರಿದಾಗ, ರಾಜ್ಯ ಸರ್ಕಾರ ಏಕೆ ಮುಂದೆ ಬಂದು ಅವರಿಗೆ ಭದ್ರತೆ ನೀಡಲಿಲ್ಲ? ಎಂದು ಅವರು ಎಕ್ಸ್ ಮಾಡಿದ್ದಾರೆ.