ಬೆಂಗಳೂರು, ಜು.5- ಮದುವೆ ಇಲ್ಲದೆ ತಾಯಿಯಾಗುವ ಮೂಲಕ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣರವರು ಕ್ರಾಂತಿಕಾರಿಯಾದ ಹೊಸ ಹೆಜ್ಜೆ ಇಟ್ಟಿದ್ದಾರೆ.ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನ ಬರೆದುಕೊಂಡಿರುವ ಮಾಹಿತಿ ಮತ್ತು ಲಗತ್ತಿಸಿರುವ ಫೋಟೊ ಹುಬ್ಬೇರುವಂತೆ ಮಾಡಿದೆ.
ನಾನು ಇದನ್ನು ಅಂದುಕೊಂಡಿರಲಿಲ್ಲ. ನಿಮ್ಮ ಬಳಿ ಈ ವಿಚಾರವನ್ನು ಹಂಚಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ನಿರೀಕ್ಷೆಯನ್ನೂ ಹೊಂದಿರಲಿಲ್ಲ. ನಾನೀಗ ಅವಳಿ ಮಕ್ಕಳಿಗೆ ಆರು ತಿಂಗಳ ಗರ್ಭಿಣಿ. ಕೃತಜ್ಞಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನನ್ನ 20 ಮತ್ತು 30 ರ ದಶಕದಲ್ಲಿ, ತಾಯ್ತನದ ಆಸೆ ನನ್ನ ಮನಸ್ಸಿನಲ್ಲಿ ಇರಲಿಲ್ಲ. ಆದರೆ ನಾನು 40 ವರ್ಷ ತುಂಬಿದಾಗ, ಆ ಆಸೆಯನ್ನು ನಿರಾಕರಿಸಲಾಗಲಿಲ್ಲ. ಒಂಟಿ ಮಹಿಳೆಯಾಗಿ, ದಾರಿ ಸುಲಭವಾಗಿರಲಿಲ್ಲ – ಅನೇಕ ಐವಿಎಫ್ ಚಿಕಿತ್ಸಾಲಯಗಳು ನನ್ನನ್ನು ಸಂಪೂರ್ಣವಾಗಿ ತಿರಸ್ಕರಿಸಿದವು ಎಂದು ಹೇಳಿಕೊಂಡಿದ್ದಾರೆ.
ನಂತರ ನಾನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ರೈನ್ ಬೊ ಆಸ್ಪತ್ರೆಯಲ್ಲಿ ಡಾ. ಸುಷ್ಮಾರನ್ನು ಭೇಟಿಯಾದೆ. ಅವರು ನನ್ನನ್ನು ಯಾವುದೇ ಉದ್ವೇಗ ಮತ್ತು ಪೂರ್ವನಿರ್ಧರಿತ ಅಭಿಪ್ರಾಯಗಳಿಲ್ಲದೆ ಸ್ವಾಗತಿಸಿದರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪಕ್ಕದಲ್ಲಿ ನಿಂತರು. ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು. ಆದರೆ ನಾನು ಅದಕ್ಕೆ ಮಾನಸಿಕವಾಗಿ ಸಿದ್ಧಳಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಬೇಷರತ್ತಾದ ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಅವರು ದಯೆ, ಆತ್ಮವಿಶ್ವಾಸ ಮತ್ತು ಅವರು ಎಲ್ಲಿಂದ ಬರುತ್ತಾರೆ ಎಂಬುದರ ಬಗ್ಗೆ ಹೆಮ್ಮೆಪಡುವವರಾಗಿ ಬೆಳೆಸಲ್ಪಡುತ್ತಾರೆ ಎಂದಿದ್ದಾರೆ.
ನನ್ನ ಈ ನಿರ್ಧಾರ ಯಾವುದೇ ಬಂಡಾಯ ಮಾರ್ಗವಲ್ಲ. ನನ್ನ ಸತ್ಯವನ್ನು ಗೌರವಿಸಲು ನಾನು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ.ನನ್ನ ಈ ನಿರ್ಧಾರ ಯಾವುದೇ ಮಹಿಳೆ ತನ್ನಲ್ಲಿ ತಾನು ನಂಬಿಕೆ ಹೊಂದಲು ಪ್ರೇರೇಪಿಸಿದರೆ ನನಗಷ್ಟೇ ಸಾಕು ಎಂದು ಹೇಳಿಕೊಂಡಿದ್ದಾರೆ.ಶೀಘ್ರದಲ್ಲೇ, ಎರಡು ಪುಟ್ಟ ಆತ್ಮಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ, ಅದು ನನ್ನ ಬದುಕಿನ ಎಲ್ಲವೂ ಆಗಿರುತ್ತವೆ. ನನ್ನ ಪಕ್ಕದಲ್ಲಿ ನಡೆದಿದ್ದಕ್ಕಾಗಿ ವೈದ್ಯರಾದ ಡಾ. ಸುಷ್ಮಾ ಅವರಿಗೆ ಧನ್ಯವಾದಗಳು ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿ ನಡೆಸಿದ್ದ ಭಾವನಾ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ಗಿಟ್ಟಿಸುವ ಪ್ರಯತ್ನ ಮಾಡಿದ್ದರು.ಕೊನೆಗೆ ಈ ಹಿಂದೆ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಬಾಲಭವನದ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದರು.
ರಾಜ್ಯದ ಹಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಿಗಿಸಿಕೊಂಡಿದ್ದರು.ಚಂದ್ರಮುಖಿ ಪ್ರಾಣಸಖಿ, ದೇವೇರಿ, ದೀಪಾವಳಿ, ಪರ್ವ, ನಿನಗಾಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಭಾವನಾ ಭಾಗೀರಥಿ ಚಿತ್ರಕ್ಕಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
- ಹಿರಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಇನ್ನಿಲ್ಲ, ಉಡುಪಿಯಲ್ಲಿ ಹೃದಯಾಘಾತದಿಂದ ನಿಧನ
- ಕುಡಿದು ಬಂದು ಹಲ್ಲೆ ಮಾಡಿದ ಪತಿಯನ್ನು ಇಟ್ಟಿಗೆಯಿಂದ ಬಡಿದು ಕೊಂದ ಪತ್ನಿ
- ಪಾರಿವಾಳ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಅಧಿಕಾರಿ
- ವಿಚ್ಛೇದನಕ್ಕೆ ಮುಂದಾದ ಪತ್ನಿಯನ್ನು ಇರಿದು ಕೊಂದ ಪತಿ
- ಬಾವಿಗೆ ಬಿದ್ದ ಮಹಿಳೆ ರಕ್ಷಣೆಗೆ ಹೋಗಿ ಪ್ರಾಣ ಬಿಟ್ಟ ಮೂವರು ಅಗ್ನಿಶಾಮಕ ದಳದ ಸಿಬ್ಬಂದಿ