ಬೆಂಗಳೂರು,ಸೆ.15-ಸೂಪರ್ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರ ಫೋನ್ ನಂಬರ್ ಹ್ಯಾಕ್ ಮಾಡಲಾಗಿದೆ. ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಅವರ ಹೆಸರಿನಲ್ಲಿ ವಾಟ್ಸಾಪ್ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಪ್ರಿಯಾಂಕಾ ಅವರ ಮೊಬೈಲ್ ನಂಬರ್ನ್ನು ಸೈಬರ್ ಖದೀಮ ಹ್ಯಾಕ್ ಮಾಡಿದ್ದಾನೆ. ಇದನ್ನು ಗಮನಿಸಿದ ತಕ್ಷಣ ಉಪೇಂದ್ರ ಅವರು ಪತ್ನಿ ಪ್ರಿಯಾಂಕಾ ಅವರೊಂದಿಗೆ ತೆರಳಿ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿರುವ ವ್ಯಕ್ತಿ ಬೇರೆ ಬೇರೆಯವರಿಗೆ ವಾಟ್ಸಾಪ್ ಮಾಡಿ ನನ್ನ ಮೊಬೈಲ್ ಯುಪಿಐ ವರ್ಕ್ ಆಗುತ್ತಿಲ್ಲ. ನೀವು ತಕ್ಷಣ ಹಣ ಕಳುಹಿಸಿ , ಎರಡು ಗಂಟೆಯಲ್ಲಿ ಹಣ ಕಳುಹಿಸುತ್ತೇನೆಂದು ಹ್ಯಾಕರ್ ಪ್ರಿಯಾಂಕಾ ಅವರು ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಮೆಸೇಜ್ ಮಾಡಿದ್ದಾನೆ.
ಹಾಗಾಗಿ ಈ ವಿಚಾರ ಅವರ ಗಮನಕ್ಕೆ ಬಂದಿದ್ದು, ಉಪೇಂದ್ರ ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪೇಂದ್ರ ಅವರು, ನನ್ನ ಅಥವಾ ಪ್ರಿಯಾಂಕಾ ಅವರ ಮೊಬೈಲ್ನಿಂದ ಹಣ ಕೊಡಿ ಎಂದು ಮೆಸೇಜ್ ರಿಕ್ವೆಸ್ಟ್ ಬಂದರೆ ಅದನ್ನು ನಿರ್ಲಕ್ಷಿಸಿ ಎಂದು ಮನವಿ ಮಾಡಿದ್ದಾರೆ.
ತಂತ್ರಜ್ಞಾನ ಮುಂದುವರೆದಂತೆ ಎಷ್ಟು ಲಾಭವಾಗುತ್ತಿದೆಯೋ ಅಷ್ಟೇ ದುಷ್ಪರಿಣಾಗಳು ಆಗುತ್ತಿವೆ. ಇದರಿಂದ ತಮಗೆ ಗೊತ್ತಿಲ್ಲದಂತೆ ಸೈಬರ್ ಕ್ರೈಂ ವಂಚಕರು ಹಣ ಗುಳುಂ ಮಾಡುತ್ತಿದ್ದಾರೆ.