ಬೆಂಗಳೂರು, ಮಾ.6- ಡಿಜಿಪಿ ಅವರ ಮಲಮಗಳು, ನಟಿ ರನ್ಯಾರಾವ್‌ಗೆ ಅಂತಾರಾಷ್ಟ್ರೀಯ ಕುಖ್ಯಾತ ಚಿನ್ನ ಕಳ್ಳಸಾಗಾಣಿಕೆದಾರನ ಸಂಪರ್ಕವಿರಬಹುದು ಎಂದು ಶಂಕಿಸಿರುವ ಡಿಆರ್‌ಐ ಅಧಿಕಾರಿಗಳು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರಾವ್ ಅವರನ್ನು ಬಂಧಿಸಿದ ಸಂದರ್ಭದಲ್ಲಿ ವಿಚಾರಣೆಗೊಳಪಡಿಸಿದ ಡಿಆರ್‌ಐ ಅಧಿಕಾರಿಗಳು ಕೆಲವು ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಅಲ್ಲದೆ, ಆಕೆಯ ಮೊಬೈಲ್ ಸಂಪರ್ಕದ ಬಗ್ಗೆ ಜಾಲಾಡಿರುವ ಡಿಆರ್‌ಐ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ರನ್ಯಾ ಅವರ ಸಂಪರ್ಕದಲ್ಲಿ ಯಾರ್ಯಾರಿ ದ್ದಾರೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಸದ್ಯದಲ್ಲೇ ಅವರೆಲ್ಲರನ್ನೂ ಸಹ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಇದುವರೆಗಿನ ತನಿಖೆ ಪ್ರಕಾರ, ರನ್ಯಾರಾವ್ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಮಧ್ಯವರ್ತಿ ಎಂಬುದು ಗೊತ್ತಾಗಿದೆ. ಈಕೆ ವಿದೇಶದಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮೂಲಕ ತಂದುಕೊಟ್ಟರೆ ಒಂದು ಕೆಜಿಗೆ ಒಂದು ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ.ರನ್ಯಾರಾವ್ ಅವರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮಲಮಗಳಾಗಿರುವುದರಿಂದ ಈಕೆಯನ್ನು ತಮ ಕೃತ್ಯಕ್ಕೆ ಬಳಸಿಕೊಂಡರೆ ಸುಲಭವಾಗಿ ಚಿನ್ನ ಕಳ್ಳಸಾಗಣೆ ಮಾಡಬಹುದೆಂಬುದು ಈ ಪ್ರಕರಣದ ಕಿಂಗ್‌ಪಿನ್ ಲೆಕ್ಕಾಚಾರ.
ಈಕೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ದುಬೈ ಹಾಗೂ ಮಲೇಷಿಯಾಗೆ ಹೋಗಿದ್ದು, 30ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದಿರುವುದನ್ನು ಡಿಆರ್‌ಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆದರೆ, ದುಬೈನಲ್ಲಿ ಈಕೆಯ ಸಂಬಂಧಿ ಯಾರೂ ಇಲ್ಲ. ಅಲ್ಲದೆ, ಈಕೆಗೆ ಸೇರಿದ ಯಾವುದೇ ಕಂಪೆನಿ ಅಥವಾ ಉದ್ಯಮವೂ ಇಲ್ಲ. ಆದರೂ ಸಹ ಈಕೆ ಅಷ್ಟೊಂದು ಬಾರಿ ದುಬೈಗೆ ಏಕೆ ಹೋಗಿಬರುತ್ತಿದ್ದರೆಂಬ ಅನುಮಾನ ಡಿಆರ್‌ಐ ಅಧಿಕಾರಿಗಳಿಗೆ ಬಂದಿತ್ತು.
ಈ ನಡುವೆ ಎರಡು ವಾರಗಳ ಹಿಂದೆಯಷ್ಟೆ ದುಬೈನಿಂದ ಬೆಂಗಳೂರಿಗೆ ರನ್ಯಾರಾವ್ ಬಂದಾಗ ಅಲ್ಲಿನ ಕಸ್ಟಮ್ಸೌ ಅಧಿಕಾರಿಗಳ ಜತೆ ಕಿರಿಕ್ ಮಾಡಿಕೊಂಡಿದ್ದರು. ಈ ವಿಷಯ ಡಿಆರ್‌ಐ ಅಧಿಕಾರಿಗಳಿಗೆ ಗೊತ್ತಾಗಿದೆ. ಪ್ರತಿ ಬಾರಿ ವಿದೇಶದಿಂದ ಈಕೆ ನಗರಕ್ಕೆ ಬಂದಾಗ ವಿಮಾನ ನಿಲ್ದಾಣ ಠಾಣೆಯ ಹೆಡ್‌ಕಾನ್ಸ್ ಟೆಬಲ್ ಒಬ್ಬರು ಹೋಗಿ ಕರೆತರುತ್ತಿದ್ದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಡಿಆರ್‌ಐ ಅಧಿಕಾರಿಗಳು ಆಕೆಯ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದರು. ಭಾನುವಾರ ರಾತ್ರಿ ರನ್ಯಾರಾವ್ ದುಬೈನಿಂದ ಬೆಂಗಳೂರಿಗೆ ಬರುತ್ತಿರುವ ಮಾಹಿತಿ ತಿಳಿದು ಡಿಆರ್‌ಐ ಅಧಿಕಾರಿಗಳು ಮೊದಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಆಕೆ ಬರುತ್ತಿದ್ದಂತೆ ತಪಾಸಣೆಗೊಳಪಡಿಸಿದಾಗ 12.56 ಕೋಟಿ ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು.
ರನ್ಯಾರಾವ್ ಫ್ಲಾಟ್ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ಪತ್ತೆಯಾಗಿದೆ. ಒಟ್ಟಾರೆ ಇದುವರೆಗೂ ನಗದು ಸೇರಿದಂತೆ 17.29 ಕೋಟಿ ಮೌಲ್ಯದ ಚಿನ್ನವನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.