ಬೆಂಗಳೂರು,ಮೇ 22- ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದ್ದ ರನ್ಯಾರಾವ್ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು, ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಂಕಷ್ಟ ತಂದಿಟ್ಟಿದೆ.ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಖಾತೆಗಳಿಂದ ರನ್ಯಾರಾವ್ ಅವರ ಕ್ರೆಡಿಟ್ ಕಾರ್ಡ್ ಬಿಲ್ 40 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ ಎಂದು ತಿಳಿದುಬಂದಿದೆ.
ರನ್ಯಾರಾವ್ ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ದುಬೈ ಹಾಗೂ ಇತರ ದೇಶಗಳಿಂದ ಭಾರತಕ್ಕೆ ಕಳ್ಳಸಾಗಾಣಿಕೆ ಮೂಲಕ ತರುತ್ತಿದ್ದರು. ರನ್ಯಾರಾವ್ ಸಿಕ್ಕಿಬಿದ್ದ ವೇಳೆ ಭಾರೀ ಚರ್ಚೆಗಳು ನಡೆದಿದ್ದವು. ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ ಪೊಲೀಸ್ ಮಹಾ ನಿರ್ದೇಶಕ ಡಾ.ಕೆ.ರಾಮಚಂದ್ರರಾವ್ ಅವರ ಮಲಮಗಳು ರನ್ಯಾರಾವ್ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಸಿಕ್ಕಿಬಿದ್ದಿದ್ದು ಭಾರೀ ಸುದ್ದಿಗೆ ಗ್ರಾಸವಾಗಿತ್ತು.
ರಾಮಚಂದ್ರರಾವ್‌ರವರ ಅಧಿಕಾರ ಪ್ರಭಾವ ಬಳಸಿಕೊಂಡು ರನ್ಯಾರಾವ್ ವಿಮಾನನಿಲ್ದಾಣದಲ್ಲಿ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ತಪಾಸಣೆಯಿಂದ ತಪ್ಪಿಸಿಕೊಂಡು ಚಿನ್ನ ತರುತ್ತಿದ್ದರು. ಆಕೆಯನ್ನು ಪೊಲೀಸ್ ವಾಹನದಲ್ಲೇ ವಿಮಾನನಿಲ್ದಾಣಕ್ಕೆ ಕರೆದೊಯ್ಯಲಾಗುತ್ತಿತ್ತು. ಅಲ್ಲಿಂದ ಕರೆತರಲು ವಿಮಾನನಿಲ್ದಾಣ ಬಳಕೆ ಮಾಡಲಾಗುತ್ತಿತ್ತು ಎಂಬ ಆರೋಪಗಳಿದ್ದವು.
ಇದರ ಪರಿಶೀಲನೆಗೆ ಹಿರಿಯ ಐಎಎಸ್ ಅಧಿಕಾರಿ ಗೌರವ್‌ಗುಪ್ತ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಗೌರವ್‌ಗುಪ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ತನಿಖಾ ವರದಿ ನೀಡಿದ್ದಾರೆ.
ಇದಕ್ಕೂ ಮೊದಲೇ ರಾಮಚಂದ್ರರಾವ್ ಅವರನ್ನು ಬಲವಂತದ ರಜೆ ಮೇಲೆ ಕಳುಹಿಸಲಾಗಿದೆ. ಅವರ ಬಡ್ತಿ ಕೂಡ ತಡೆಹಿಡಿದಿರುವುದಾಗಿ ತಿಳಿದುಬಂದಿದೆ. ರನ್ಯಾರಾವ್ ಸಿಕ್ಕಿಬಿದ್ದಾಗ ಚಿನ್ನ ಕಳ್ಳಸಾಗಾಣಿಕೆಯಲ್ಲಿ ಇಬ್ಬರು ಸಚಿವರ ಬೆಂಬಲವಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಕೇಂದ್ರ ಆದಾಯ ಗುಪ್ತಚರ ಸಂಸ್ಥೆ ಪ್ರಕರಣವನ್ನು ಬಯಲಿಗೆಳೆದಿತ್ತು. ನಂತರ ಸಿಬಿಐ, ಇ.ಡಿ, ಮತ್ತು ಆದಾಯ ತೆರಿಗೆ ಸಂಸ್ಥೆಗಳು ತಮ ವ್ಯಾಪ್ತಿಯಲ್ಲಿ ಬೇರೆಬೇರೆ ರೀತಿಯಲ್ಲಿ ತನಿಖೆ ನಡೆಸುತ್ತಿವೆ.
ಪರಮೇಶ್ವರ್ ಅವರ ಒಡೆತನದ ಸಿದ್ದಾರ್ಥ ಸಂಸ್ಥೆಗೆ ರನ್ಯಾರಾವ್ ಅವರ ಕ್ರೆಡಿಟ್ ಕಾರ್ಡ್‌ನಿಂದ ಬಿಲ್ ಪಾವತಿ ಮಾಡಿರುವುದು ಈಗ ತನಿಖೆಯ ಮೂಲಾಂಶವಾಗಿದೆ. ಅದು ಸರಿಸುಮಾರು 40 ಲಕ್ಷ ರೂ.ಗಳು ಹಂತಹಂತವಾಗಿ ಪಾವತಿಯಾಗಿದೆ ಎಂಬ ಆರೋಪಗಳಿವೆ.ಪರಮೇಶ್ವರ್ ಈ ಆರೋಪವನ್ನು ನಿರಾಕರಿಸುವ ಬದಲಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ತನಿಖೆಯಲ್ಲಿ ಯಾವುದೇ ಅಂಶಗಳು ಪತ್ತೆಯಾದರೂ ನಾನು ಅದಕ್ಕೆ ಸಿದ್ಧ ಎಂದು ಪರಮೇಶ್ವರ್ ಹೇಳಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.ಪ್ರಕರಣಕ್ಕೆ ರಾಜಕೀಯ ತಿರುವು ನೀಡಲು ಕಾಂಗ್ರೆಸ್ ಹವಣಿಸುತ್ತಿದೆ. ಸೋನಿಯಾಗಾಂಧಿಯವರ ನ್ಯಾಷನಲ್ ಹೆರಾಲ್‌್ಡ ಪ್ರಕರಣವನ್ನೂ ಇದರೊಂದಿಗೆ ಸಮೀಕರಿಸಿ ದಲಿತ ನಾಯಕನ ಮೇಲೆ ಕೇಂದ್ರ ಸರ್ಕಾರ ದಾಳಿ ಮಾಡಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಕೂಡ ಕೇಂದ್ರ ಸರ್ಕಾರವನ್ನು ಇದೇ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಆದರೆ ಚಿನ್ನ ಕಳ್ಳಸಾಗಾಣಿಕೆ ವಿಚಾರ ಇ.ಡಿ. ದಾಳಿಯಲ್ಲಿ ತಳುಕು ಹಾಕಿಕೊಳ್ಳುತ್ತಿದ್ದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ನಿಧಾನಕ್ಕೆ ಹಿಂದೆ ಸರಿಯಲಾರಂಭಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ದಾಳಿಯಾಗಿದ್ದರೆ ಪರಮೇಶ್ವರ್ ಅವರಿಗೆ ಪಕ್ಷದ ನೈತಿಕ ಬೆಂಬಲ ನಿರಾಂತಕವಾಗಿ ದೊರೆಯುತ್ತಿತ್ತು. ಆದರೆ ಚಿನ್ನ ಕಳ್ಳಸಾಗಾಣಿಕೆ ತಳುಕು ಹಾಕಿಕೊಳ್ಳುತ್ತಿದ್ದಂತೆ ಎಲ್ಲರೂ ಹಿಂದೆಮುಂದೆ ನೋಡಲು ಆರಂಭಿಸುತ್ತಿದ್ದಾರೆ. ಆದರೆ ಕೆಲ ನಾಯಕರು ಮೇಲ್ನೋಟಕ್ಕೆ ಪರಮೇಶ್ವರ್ ಮನೆಗೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸುವ ತೋರ್ಪಡಿಕೆ ಪ್ರದರ್ಶನ ಮಾಡಿದ್ದಾರೆ.