ಬೆಂಗಳೂರು,ಸೆ.15- ಸಾಹಸಸಿಂಹ ಡಾ. ವಿಷ್ಣುವರ್ಧನ್‌ರವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ ಹಿನ್ನೆಲೆಯಲ್ಲೇ ನಟ, ರಾಜಕಾರಣಿ ರೆಬಲ್‌ಸ್ಟಾರ್ ಅಂಬರೀಶ್‌ರವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಹಿರಿಯ ನಟಿ ತಾರಾ ಅನುರಾಧ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಿದ್ದಾರೆ.
ಸದಾಶಿವ ನಗರದಲ್ಲಿರುವ ಡಿಸಿಎಂ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದ ಅವರು, ಅಂಬರೀಶ್‌ರವರೂ ಕೂಡ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಮನೋಜ್ಞ ನಟನೆಯ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಅಂಬರೀಶ್‌ರವರನ್ನು ನೀವೂ ಸಹ ಹತ್ತಿರದಿಂದ ಬಲ್ಲವರಾಗಿದ್ದು, ಆತೀಯರಾಗಿದ್ದರು.
ಡಾ.ವಿಷ್ಣುವರ್ಧನ್ ಹಾಗೂ ಬಿ.ಸರೋಜಾ ದೇವಿಯವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಸಂತಸದ ವಿಷಯ. ಅದೇ ರೀತಿ ಮಂಡ್ಯದ ಗಂಡು ಅಂಬರೀಶ್ ಅವರಿಗೂ ಕೂಡ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಅಭಿಮಾನಿಗಳ ಪರವಾಗಿ ಕೋರಿದರು.