Tuesday, July 2, 2024
Homeರಾಜಕೀಯಚುನಾವಣೆ ಫಲಿತಾಂಶದ ಬಳಿಕ ಹೆಚ್ಚುವರಿ ಡಿಸಿಎಂ ಹುದ್ದೆಯ ಚರ್ಚೆಗೆ ಬ್ರೇಕ್

ಚುನಾವಣೆ ಫಲಿತಾಂಶದ ಬಳಿಕ ಹೆಚ್ಚುವರಿ ಡಿಸಿಎಂ ಹುದ್ದೆಯ ಚರ್ಚೆಗೆ ಬ್ರೇಕ್

ಬೆಂಗಳೂರು,ಜೂ.10– ಜಾತಿವಾರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಪದೇಪದೇ ಪ್ರತಿಪಾದಿಸುತ್ತಿದ್ದ ಸಚಿವರು ಹಾಗೂ ಕಾಂಗ್ರೆಸ್‌‍ ನಾಯಕರು ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು, ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆ ಇಲ್ಲ ಎಂದು ಜಾರಿಕೊಳ್ಳಲಾರಂಭಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಲಿಂಗಾಯತ, ಹಿಂದುಳಿದ ವರ್ಗ ಹಾಗೂ ಮಹಿಳೆ ಸೇರಿದಂತೆ ಐದು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬುದು ಕಾಂಗ್ರೆಸ್‌‍ ನಾಯಕರ ಆಗ್ರಹವಾಗಿತ್ತು.

ಆರಂಭದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರಿಗೆ ಗೃಹ ಸಚಿವ ಪರಮೇಶ್ವರ್‌, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಹಿರಿಯ ಶಾಸಕ ಬಸವರಾಜರಾಯರೆಡ್ಡಿ ಸೇರಿದಂತೆ ಅನೇಕರು ಧ್ವನಿಗೂಡಿಸಿದ್ದರು.

ಇದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್‌‍ ಪಕ್ಷದಲ್ಲಿ ಮುಜುಗರದ ವಾತಾವರಣ ಸೃಷ್ಟಿಸಿತ್ತು. ಒಂದು ಹಂತದಲ್ಲಿ ಮಧ್ಯಪ್ರವೇಶಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗ ಲೋಕಸಭಾ ಚುನಾವಣೆಯತ್ತ ಗಮನಹರಿಸಿ ಅನಗತ್ಯ ವಿಚಾರಗಳ ಬಗ್ಗೆ ಗೊಂದಲ ಬೇಡ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯ ಸೃಷ್ಟಿಯ ಸಾಧ್ಯತೆಗಳನ್ನು ಅಲ್ಲಗಳೆದಿದ್ದರು. ಅಲ್ಲಿಗೆ ಪದೇಪದೇ ಚರ್ಚೆ ಮಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದವರ ಬಾಯಿ ಬಂದ್‌ ಆಗಿತ್ತು.

ಲೋಕಸಭಾ ಚುನಾವಣೆ ಬಳಿಕ ಇದು ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಸಚಿವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್‌‍ಗೆ ಲೀಡ್‌ ಕೊರತೆಯಾಗಿದ್ದು, ಜೆಡಿಎಸ್‌‍ ಮತ್ತು ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಮತ ಗಳಿಸಿದ್ದಾರೆ.

ಕಾಂಗ್ರೆಸ್‌‍ ಅಭ್ಯರ್ಥಿಗಳು ಸೋಲು ಕಂಡಿದ್ದಾದರೆ, ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಯಾಗಬೇಕಾಗುತ್ತದೆ. ಸಚಿವರ ತಲೆದಂಡವಾಗುವ ಸಾಧ್ಯತೆಯೂ ಇದೆ ಎಂಬ ಚರ್ಚೆಗಳಾಗಿದ್ದವು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಹುಲ್‌ಗಾಂಧಿ ಪ್ರಮುಖ ಸಚಿವರ ಜೊತೆ ಸಭೆ ನಡೆಸಿದ್ದು, ಕಾಂಗ್ರೆಸ್‌‍ ಸೋಲಿಗೆ ಅಸಮಾಧಾನ ಹೊರಹಾಕಿದ್ದರು. ಸಚಿವರ ಕ್ಷೇತ್ರಗಳಲ್ಲಿನ ಹಿನ್ನಡೆ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಇದು ಬಹಳಷ್ಟು ಮಂದಿ ಸಚಿವರಿಗೆ ಆತಂಕ ಸೃಷ್ಟಿಸಿದ್ದು, ಕುರ್ಚಿಯ ಕುತ್ತಿನ ಕೆಟ್ಟ ಕನಸು ಬೀಳುವಂತಾಗಿದೆ.

ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆಯ ಸದ್ದು ಅಡಗಿ ಹೋಗಿದೆ. ಎಐಸಿಸಿಯ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಯನ್ನು ಸೃಷ್ಟಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಒಂದು ಕಾಲದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಹುದ್ದೆಯ ತೂಕ ತಗ್ಗಲಿದೆ ಎಂಬ ಕಾರಣಕ್ಕಾಗಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಗೆ ವಿರೋಧ ವ್ಯಕ್ತವಾಗಿತ್ತು. ಈಗ ಖುದ್ದು ಡಿ.ಕೆ.ಶಿವಕುಮಾರ್‌ ಅವರೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಪರವಾಗಿ ಮಾತನಾಡುತ್ತಿದ್ದಾರೆ ಎನ್ನಲಾಗಿದೆ.

ಆದರೆ ಜಾತಿವಾರು ಪ್ರಾಧಾನ್ಯತೆ ಸಿಗಬೇಕು ಎಂದು ಹೇಳಿದ್ದ ಸಚಿವ ಸತೀಶ್‌ ಜಾರಕಿಹೊಳಿ, ಸದ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪ ಇಲ್ಲ ಎಂದು ಅಲ್ಲಗಳೆದಿದ್ದಾರೆ. ಇವರ ಪುತ್ರಿ ಪ್ರಿಯಾಂಕ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿ ಫಾರಂ ನೀಡಿದ್ದು, ಅವರು ಗೆದ್ದು ಸಂಸದರಾಗಿದ್ದಾರೆ. ಹೀಗಾಗಿ ಒಂದೇ ಮನೆಗೆ ಸಂಸದ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಎರಡೂ ದೊರೆಯುವ ಅವಕಾಶಗಳು ಇಲ್ಲದಿರುವುದರಿಂದ ಅವರು ಚರ್ಚೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ತುಮಕೂರು ಲೋಕಸಭಾ ಕ್ಷೇತ್ರದ ಪೈಕಿ ಕೆ.ಎನ್‌.ರಾಜಣ್ಣ ಅವರು ಪರಮೇಶ್ವರ್‌ ಅವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರಿಗೆ ಹೆಚ್ಚಿನ ಲೀಡ್‌ ಬಂದಿವೆ. ಹೀಗಾಗಿ ಅವರೂ ಕೂಡ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಉಪಮುಖ್ಯಮಂತ್ರಿ ಹುದ್ದೆ ಪದೇಪದೇ ಚರ್ಚೆಯಾಗುವುದಿಲ್ಲ. ಅಲ್ಲಿಇಲ್ಲಿ ನಾಲ್ಕೈದು ಜನ ಮಾತನಾಡಿದರೆ ಅದು ಈಡೇರುವುದೂ ಇಲ್ಲ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್‌ ಇದ್ದಾಗ ಹೆಚ್ಚುವರಿ ಹುದ್ದೆಗಳ ಸೃಷ್ಟಿ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.
ಒಟ್ಟಾರೆ ಸರ್ಕಾರಕ್ಕೆ ತಲೆನೋವಾಗಬಹುದಾಗಿದ್ದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆಗಳು ಮೋಡ ಕರಗಿದಂತೆ ತಣ್ಣಗಾಗಿವೆ.

RELATED ARTICLES

Latest News