ಬೆಂಗಳೂರು, ನ. 15- ಜೈಲುಗಳಲ್ಲಿನ ವ್ಯವಸ್ಥೆಗಳು ಹಾಗೂ ಲೋಪಗಳ ಅಧ್ಯಯನಕ್ಕಾಗಿ ರಚಿಸಲಾಗಿರುವ ಎಡಿಜಿಪಿ ಆರ್. ಹಿತೇಂದ್ರ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಜೈಲುಗಳಲ್ಲಿ ವಿಚಾರಣಾಧೀನ ಹಾಗೂ ಶಿಕ್ಷಾಬಂಧಿ ಖೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಬ್ಯಾರಕ್ ನಂ-7ರ 8ನೇ ಕೊಠಡಿಯಲ್ಲಿ ಕೆಲವು ವಿಚಾರಣಾಧೀನ ಖೈದಿಗಳು ಮದ್ಯ ಸೇವಿಸಿ ಸಾಮೂಹಿಕ ನೃತ್ಯ ಮಾಡುತ್ತಿರುವುದು ಹಾಗೂ ವಿಕೃತಕಾಮಿ ಉಮೇಶ್‌ರೆಡ್ಡಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು, ಉಗ್ರವಾದದ ಆರೋಪದ ಮೇಲೆ ಬಂಧಿತನಾಗಿರುವ ವ್ಯಕ್ತಿಯ ಕೈಯಲ್ಲೂ ಮೊಬೈಲ್ ಇರುವುದು ವೈರಲ್ ಆದ ವಿಡಿಯೋಗಳಲ್ಲಿ ಕಂಡು ಬಂದಿತ್ತು.
ಇದು ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದಲ್ಲದೇ, ಗಂಭೀರ ಸ್ವರೂಪದ ಭದ್ರತಾ ಲೋಪಗಳನ್ನು ಎತ್ತಿ ತೋರಿಸಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಳೆದ ಸೋಮವಾರ ಬಂಧಿಖಾನೆ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿದರು. ಆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳ ಉನ್ನತಾಧಿಕಾರ ಸಮಿತಿ ರಚಿಸಿದರು. ಸಮಿತಿಯಲ್ಲಿ ಐಜಿಪಿ ಸಂದೀಪ್ ಪಾಟೀಲ್, ಎಸ್‌ಪಿಗಳಾದ ಅಮರನಾಥ ರೆಡ್ಡಿ, ರಿಷ್ಯಂತ್ ಅವರುಗಳಿದ್ದಾರೆ.
ಈ ಸಮಿತಿ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಮೊದಲು ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿತ್ತು. ಬಳಿಕ ಜೈಲಿನ ಒಳಗೆ ಹಾಗೂ ಬ್ಯಾರಕ್‌ಗಳ ಖುದ್ದು ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ ಅವರು ಉಪಸ್ಥಿತರಿದ್ದರು.
ಜೈಲಿನಲ್ಲಿ ಖೈದಿಗಳನ್ನು ಭೇಟಿ ಮಾಡಲು ಸಾರ್ವಜನಿಕರಿಗೆ ಇರುವ ವ್ಯವಸ್ಥೆಗಳು, ಸಿಸಿಟಿವಿ, ಜಾಮರ್ ಸೇರಿದಂತೆ ಇತರ ಸಲಕರಣೆಗಳ ಕಾರ್ಯಕ್ಷಮತೆ, ಅಧಿಕಾರಿ ಮತ್ತು ಸಿಬ್ಬಂದಿಗಳ ಹೊಣೆಗಾರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದಲ್ಲಿರುವ ಜೈಲುಗಳ ವ್ಯವಸ್ಥೆಗಳ ಪರಿಶೀಲನೆ ನಡೆಸಿ ವರದಿ ನೀಡಲು ಸಮಿತಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿ ಅಧಿಕಾರಿಗಳು ಇಂದಿನಿಂದ ಜೈಲುಗಳ ಭೇಟಿಗೆ ಮುಂದಾಗಿದ್ದಾರೆ.
