ಬೆಂಗಳೂರು, ಫೆ.10-ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಎಂದು ಪರಿಗಣಿಸಲಾದ ಏರೋ ಇಂಡಿಯಾದ 15 ನೇ ಆವೃತ್ತಿಯನ್ನುಇಲ್ಲಿನ ಯಲಹಂಕ ವಾಯು ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.
ದಿ ರನ್‌ವೇ ಟು ಎ ಬಿಲಿಯನ್ ಆಪರ್ಚ್ಯುನಿಟೀಸ್ ಎಂಬ ಧ್ಯೇಯ ವಾಕ್ಯದೊಂದಿಗೆ ಐದು ದಿನಗಳ ಜಾಗತಿಕ ಮಟ್ಟದ ರೊಬೊಟಿಕ್ ಪ್ರದರ್ಶನ ಹೊಸ ಮೆರಗು ನೀಡಿದೆ.ವೈಮಾನಿಕ, ತಂತ್ರಜ್ಞಾನ,ರೋಬೊಟಿಕ್, ರೇಡಾರ್ ಸೇರಿ ಅತ್ಯಾಧುನಿಕ ಸಾಧನಗಳನ್ನು ದೇಶ -ವಿದೇಶಗಳ ಕಂಪನಿಗಳು ಪರಿಚಯಿಸಿವೆ.ಭಾರತದ ವೈಮಾನಿಕ ಪರಾಕ್ರಮ ಮತ್ತು ಸ್ಥಳೀಯ ಅತ್ಯಾಧುನಿಕ ನಾವೀನ್ಯತೆಗಳನ್ನು ಜಾಗತಿಕವಾಗಿ ಪ್ರದರ್ಶಿಸುತ್ತದೆ.
ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ದೃಷ್ಟಿಕೋನಕ್ಕೆ ಅನುಗುಣವಾಗಿ, ದೇಶೀಕರಣ ಪ್ರಕ್ರಿಯೆ ತ್ವರಿತಗೊಳಿಸಲು ಅಂತರರಾಷ್ಟ್ರೀಯ ಸಹಯೋಗಗಳನ್ನು ರೂಪಿಸಲು ಏರೋ ಇಂಡಿಯಾ ಒಂದು ವೇದಿಕೆಯಾಗಿದೆ.
ಮುಂದಿನ 2047 ರ ವೇಳೆಗೆ ಭಾರತ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುವ ಕೇಂದ್ರ ಸರ್ಕಾರದ ಸಂಕಲ್ಪಕ್ಕೆ ಒತ್ತು ನೀಡಲಾಗುತ್ತಿದೆ .ಸುಮಾರು 70 ಕ್ಕೂ ಹೆಚ್ಚು ದೇಶಗಳು ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದು,ಹಲವು ರಾಷ್ಟ್ರಗಳ ಸೇನಾ ಮುಖ್ಯಸ್ಥರು ಸಾಕ್ಷಿಯಾಗಿದ್ದಾರೆ.ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್,ರಕ್ಷಣಾ ವಲಯದ ಮೂರು ಪಡೆಗಳ ಸೇನಾ ಮುಖ್ಯಸ್ಥರು ಸೇರಿದಂತೆ ಇತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲೋಹದಕ್ಕಿಗಳ ಅಬ್ಬರ:
ಐದನೇ ಪೀಳಿಗೆಯ ಸಮರ ವಿಮಾನಗಳ ಅರ್ಭಟ ನೋಡುಗರ ಮೈನವಿರೕಳಿಸಿತು .ಅಮೆರಿಕದ ಎಫ್-35 ,ರಷ್ಯಾದ ಸೂಪರ್ ಸಾನಿಕ್ ಸುಕೊಯ್,ಸೇರಿದಂತೆ ದೇಶೀಯ ತೇಜಸ್ ಚಮತ್ಕಾರ ಆಕರ್ಷಿಸಿದೆ.
ಭಾರತೀಯ ವಾಯು ಪಡೆಗೆ ಮತ್ತುಷ್ಟು ಬಲ ನೀಡಲು ಮತ್ತಷ್ಟು ಸಮರ ವಿಮಾನ ಖರೀದಿಗೆ ಕೇಂದ್ರ ಸರ್ಕಾರ ಎದುರು ನೋಡುತ್ತಿದ್ದು ಅಮೆರಿಕ ಭಾರಿ ಲಾಬಿ ಮಾಡುತ್ತಿದೆ .ಈ ಕಾರ್ಯಕ್ರಮವು ರಕ್ಷಣಾ ಸಚಿವರ ಸಮಾವೇಶ ಭಾರಿ ಮಹತ್ವ ಪಡೆದಿದ್ದು,ನಂತರ ನಡೆಯುವ ವಿವಿಧ ಕಂಪನಿಗಳ ಸಿಇಒಗಳ ದುಂಡುಮೇಜಿನ ಸಭೆಯಲ್ಲಿ ಹಲವು ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.
ವಿಚಾರ ಸಂಕಿರಣಗಳು ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾರಿ ಹೋಡಿಕೆ ಹರಿದು ಬರುವ ಸಾಧ್ಯತೆ ಇದೆ.ಒಟ್ಟು 42,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಪ್ರದರ್ಶನ ಆಯೋಜಿಸಲಾಗಿದ್ದು, 150 ವಿದೇಶಿ ಕಂಪನಿಗಳು ಸೇರಿದಂತೆ 900 ಕ್ಕೂ ಹೆಚ್ಚು ದೇಶೀಯ ಪ್ರದರ್ಶಕರ ಭಾಗವಹಿದ್ದು,ಹಿಂದಿನ ಆವೃತ್ತಿಗಿಂತ ಈ ಬಾರಿ ಅತಿದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆ ಪಡೆದಿದೆ.