ಕಿಂಗ್‌ಸ್ಟನ್ , ಜೂ. 25– ನವೀನ್ ಉಲ್ ಹಕ್ (26ಕೆ 4) ಹಾಗೂ ರಶೀದ್ ಖಾನ್ (23ಕ್ಕೆ 4) ಅವರ ಅವರ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾದೇಶ 8 ರನ್‌ಗಳ ಸೋಲು ಕಂಡು ಮರ್ಮಾಘಾತ ಅನುಭವಿಸಿದರೆ, ಈ ಜಯದೊಂದಿಗೆ ಆಫಘಾನಿಸ್ತಾನ ಸೆಮಿಫೈನಲ್‌ಗೆ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿ, ಆಸ್ಟ್ರೇಲಿಯಾದ ಸೆಮೀಸ್ ಆಸೆಗೆ ತಣ್ಣೀರೆರಚಿದೆ.
ಮಳೆ ಬಾಧಿತ ಪಂದ್ಯದಲ್ಲಿ 19 ಓವರ್‌ಗಳಲ್ಲಿ 114 ರನ್‌ಗಳ ಗುರಿ ಪಡೆದ ಬಾಂಗ್ಲಾದೇಶ ಆರಂಭಿಕ ಆಟಗಾರ ಲಿಟನ್ ದಾಸ್ (ಅಜೇಯ 54) ಅವರ ಏಕಾಂಗಿ ಹೋರಾಟದ ನಡುವೆಯೂ 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲ್‌ಔಟ್ ಆಗುವ ಮೂಲಕ 8 ರನ್‌ಗಳ ಸೋಲು ಕಂಡಿತು.
115 ರನ್‌ಗಳಿಗೆ ಆಫ್ಘನ್ ಸೀಮಿತ:
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಫಘಾನಿಸ್ತಾನ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಜ್ (43 ರನ್) ಹಾಗೂ ನಾಯಕ ರಶೀದ್ ಖಾನ್ (19 ರನ್) ಅವರ ಆಟದ ನೆರವಿನಿಂದ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 115 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.
ಬಾಂಗ್ಲಾದೇಶದ ರಿಶೆದ್ ಹುಸೆನ್ (3 ವಿಕೆಟ್) ಯಶಸ್ವಿ ಬೌಲರ್ ಎನಿಸಿಕೊಂಡರೆ, ಟಸ್ಕಿನ್ ಅಹಮದ್ ಹಾಗೂ ಮುಸ್ತಾಫಿಜುರ್ ರೆಹಮಾನ್ ತಲಾ ಒಂದು ವಿಕೆಟ್ ಪಡೆದರು. ನವೀನ್ ಉಲ್ ಹಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.