ಅಹಮದಾಬಾದ್,ಜ.6- ಕರ್ನಾಟಕದಲ್ಲಿ ಇಬ್ಬರು ಮಕ್ಕಳಿಗೆ ಎಚ್ಎಂಪಿ ವೈರಸ್ ಕಾಣಿಸಿಕೊಂಡಿರುವ ಬೆನ್ನಲ್ಲೇ ಗುಜರಾತ್ನಲ್ಲೂ ಎರಡು ತಿಂಗಳ ಮಗುವಿನಲ್ಲೂ ಪತ್ತೆಯಾಗಿದೆ. ಅಹಮದಾಬಾದ್ನಲ್ಲಿ ದಾಖಲಾಗಿದ್ದ ಎರಡು ತಿಂಗಳ ಮಗುವಿನಲ್ಲಿ ಎಚ್ಎಂಪಿವಿ ಕಾಣಿಸಿಕೊಂಡಿರುವುದನ್ನು ಐಸಿಎಂಆರ್ ದೃಢಪಡಿಸಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಆತಂಕ ಬೇಡ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಖಾಸಗಿ ಪ್ರಯೋಗಾಲಯಕ್ಕೆ ರಕ್ತಪರೀಕ್ಷೆಯನ್ನು ಕಳುಹಿಸಿಕೊಡಲಾಗಿತ್ತು. ಸೋಮವಾರ ಪ್ರಯೋಗಾಲಯದ ವರದಿಯಲ್ಲಿ ಎಚ್ಎಂಪಿವಿ ಇರುವುದು ದೃಢಪಟ್ಟಿದೆ.
ಮಗುವಿಗೆ ಚೀನಾ ಮಾದರಿಯ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಭುಪೇಂದ್ರ ಪಟೇಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಗುಜರಾತ್ನಲ್ಲೂ ಅಲ್ಲಿನ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಇದನ್ನು ಉಲ್ಲಂಘಿಸಬಾರದು ಎಂದು ಮನವಿ ಮಾಡಿದೆ.
ಮಗುವಿಗೆ ಚೀನಾ ಮಾದರಿಯ ಸೋಂಕು ಕಾಣಿಸಿಕೊಂಡಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಕೇಂದ್ರ ಸರ್ಕಾರದ ಸೂಚನೆಯಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು, ಔಷಧಗಳು ಸಂಗ್ರಹಣೆ ಮಾಡಿಕೊಳ್ಳಲಾಗಿದೆ.
ಐಸಿಎಂಆರ್ ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ನಂಬಬಾರದು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳಿಗೆ ಕಿವಿಗೊಡದಂತೆ ಮುಖ್ಯಮಂತ್ರಿ ಭುಪೇಂದ್ರ ಪಟೇಲ್ ಮನವಿ ಮಾಡಿದ್ದಾರೆ.