Friday, November 22, 2024
Homeರಾಜಕೀಯ | Politicsಉಪಚುನಾವಣೆ ಘೋಷಣೆ ಬೆನ್ನಲ್ಲೇ ಮೂರೂ ಪಕ್ಷಗಳೂ ಫುಲ್ ಆಕ್ಟಿವ್, ಗೆಲುವಿಗೆ ಗೇಮ್ ಪ್ಲಾನ್

ಉಪಚುನಾವಣೆ ಘೋಷಣೆ ಬೆನ್ನಲ್ಲೇ ಮೂರೂ ಪಕ್ಷಗಳೂ ಫುಲ್ ಆಕ್ಟಿವ್, ಗೆಲುವಿಗೆ ಗೇಮ್ ಪ್ಲಾನ್

Karnataka Byelection

ಬೆಂಗಳೂರು,ಅ.16- ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರೂ ಪಕ್ಷಗಳಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದು, ಮಿನಿ ಸಮರದಲ್ಲಿ ಗೆಲುವು ಸಾಧಿಸಲು ನಾನಾ ರೀತಿಯ ರಣತಂತ್ರಗಾರಿಕೆಗಳು ಆರಂಭಗೊಂಡಿವೆ.

ಕೇಂದ್ರ ಚುನಾವಣಾ ಆಯೋಗ ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವಿ, ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳ ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದೆ. ಈ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಎನ್‌ಡಿಎ ಮಿತ್ರಪಕ್ಷಗಳ ಪೈಕಿ ಬಿಜೆಪಿ 2 ರಲ್ಲಿ ಜೆಡಿಎಸ್‌‍ 1 ಕ್ಷೇತ್ರದಲ್ಲಿ ಹುರಿಯಾಳುಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಈ ನಡುವೆ ಉಪಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸಲು ಆಕಾಂಕ್ಷಿಗಳು ಭಾರಿ ಕಸರತ್ತು ನಡೆಸುತ್ತಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಮಹತ್ವದ ಸಮಾಲೋಚನೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಹಾಗೂ ಸಚಿವರ ಉಸ್ತುವಾರಿ ನಿಯೋಜನೆ ಕುರಿತಂತೆ ಚರ್ಚಿಸಿದ್ದಾರೆ.

ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ.ಸಿ.ವೇಣುಗೋಪಾಲ್‌ ಅವರು ರಾಜ್ಯಕ್ಕೆ ಆಗಮಿಸಿರುವುದರಿಂದ ಅವರ ಜೊತೆ ಚರ್ಚೆ ಮಾಡಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ 2-3 ದಿನಗಳ ಒಳಗಾಗಿ ಹೈಕಮಾಂಡ್‌ಗೆ ವರದಿ ರವಾನಿಸಲು ನಿರ್ಧರಿಸಲಾಗಿದೆ. ಈಗಾಗಲೇ ಈ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರ ಜೊತೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇರವಾಗಿ ಅಖಾಡಕ್ಕಿಳಿದು ತೊಡೆ ತಟ್ಟಲಿದ್ದಾರೆ.

ಇತ್ತ ಜೆಡಿಎಸ್‌‍ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಳ್ಳುವ ಜಿದ್ದಿಗೆ ಬಿದ್ದಿದ್ದು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಮ ಪುತ್ರ ನಿಖಿಲ್‌ ಕುಮಾರಸ್ವಾಮಿಯವರ ಭವಿಷ್ಯ ರೂಪಿಸಲು ಮತ್ತೊಂದು ಪ್ರಯತ್ನವನ್ನು ಆರಂಭಿಸಿದ್ದಾರೆ. ಬಿಜೆಪಿಯ ವಿಧಾನಪರಿಷತ್‌ನ ಸದಸ್ಯರೂ ಆಗಿರುವ ಸಿ.ಪಿ.ಯೋಗೇಶ್ವರ್‌ ಶತಾಯಗತಾಯ ಸ್ಪರ್ಧೆ ಮಾಡುವುದಾಗಿ ಹೇಳುವ ಮೂಲಕ ಬಿಸಿ ತುಪ್ಪವಾಗಿದ್ದಾರೆ. ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಹೈ ವೋಲ್ಟೇಜ್‌ ಅಖಾಡವಾಗಿ ಪರಿವರ್ತನೆಯಾಗಿದೆ.

ಜೆಡಿಎಸ್‌‍ ಮತ್ತು ಬಿಜೆಪಿ ನಡುವೆ ಈವರೆಗೂ ಸ್ಥಾನ ಹಂಚಿಕೆ ಹಾಗೂ ಚುನಾವಣಾ ರಣತಂತ್ರಗಳ ಬಗ್ಗೆ ಅಧಿಕೃತ ಘೋಷಣೆಗಳಾಗಿಲ್ಲ. ತೆರೆಮರೆಯಲ್ಲಿ ಸಾಕಷ್ಟು ಚರ್ಚೆಗಳು, ತಯಾರಿಗಳು ನಡೆಯುತ್ತಲೇ ಇವೆ.

ಆಡಳಿತಾರೂಢ ಕಾಂಗ್ರೆಸ್‌‍ಗೆ ಸೋಲುಣಿಸಲು ಎರಡೂ ಪಕ್ಷಗಳು ಜಂಟಿ ಹೋರಾಟ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿಯವರು ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಶಿಗ್ಗಾವಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದರೆ ಇತ್ತ ಗಡಿನಾಡು ಬಳ್ಳಾರಿಯ ಸಂಡೂರಿನಲ್ಲಿ ಮಾಜಿ ಸಚಿವ ಶ್ರೀರಾಮಲು ಅಖಾಡಕ್ಕಿಳಿದು ವಿಧಾನಸಭೆ ಪ್ರವೇಶಿಸುವ ಉಮೇದಿನಲ್ಲಿದ್ದಾರೆ. ಈ ಕ್ಷೇತ್ರದ ಉಸ್ತುವಾರಿಯನ್ನು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ವಹಿಸಿಕೊಳ್ಳುವ ಸಾಧ್ಯತೆಗಳಿವೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌‍ನಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಮತ್ತು ಸಂಸದ ತುಕಾರಾಂ ಈಗಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ನಾಗೇಂದ್ರ ಅವರು ತಮ ಸಾಮರ್ಥ್ಯವನ್ನು ಪಣಕ್ಕಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿದರೆ ಇಲ್ಲಿ ಕುಮಾರಸ್ವಾಮಿಯವರು ಠಕ್ಕರ್‌ ನೀಡಲು ಸಜ್ಜಾಗಿ ನಿಂತಿದ್ದಾರೆ. ಶಿಗ್ಗಾವಿಯಲ್ಲಿ ಬಸವರಾಜ ಬೊಮಾಯಿ ಅವರ ಪ್ರಾಭಲ್ಯಕ್ಕೆ ಪ್ರತಿಸ್ಪರ್ಧೆ ನೀಡಲು ಕಾಂಗ್ರೆಸ್‌‍ನಲ್ಲಿ ಸಮರ್ಥ ಹುರಿಯಾಳುಗಳ ಕೊರತೆಯಿದೆ.

ಮೂರೂ ಕ್ಷೇತ್ರಗಳಲ್ಲೂ ಆಡಳಿತಾರೂಢ ಪಕ್ಷ ಯಾರು ಅಭ್ಯರ್ಥಿ ಎಂದು ಘೋಷಿಸಿಲ್ಲ ಅಥವಾ ಗುರುತಿಸಿಯೂ ಇಲ್ಲ. ಸಚಿವರ ಆಂತರಿಕ ಸಮಿತಿ ನೀಡಿರುವ ವರದಿ ಕೂಡ 2-3 ಹೆಸರುಗಳನ್ನು ಸೂಚಿಸಿದೆ. ಅದರ ಹೊರತಾಗಿಯೂ ಬೇರೆಯವರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಚನ್ನಪಟ್ಟಣದ ಅಭ್ಯರ್ಥಿಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರ ನಡುವೆ ಚರ್ಚೆ ನಡೆದ ಬಳಿಕವಷ್ಟೆಯೇ ಅಂತಿಮ ನಿರ್ಧಾರವಾಗುವ ಸಾಧ್ಯತೆಯಿದೆ. ಆದರೆ ಮೇಲ್ನೋಟಕ್ಕೆ ನಿಖಿಲ್‌ ಕುಮಾರಸ್ವಾಮಿ ಈಗಾಗಲೇ ರಣಾಂಗಣವನ್ನು ಪ್ರವೇಶಿಸಿದ್ದಾರೆ.

ಸಿ.ಪಿ.ಯೋಗೇಶ್ವರ್‌ ಖಾಸಗಿ ರೆಸಾರ್ಟ್‌ನಲ್ಲಿ ಬೆಂಬಲಿಗರ ಸಭೆ ನಡೆಸಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಒಟ್ಟಿನಲ್ಲಿ ಮೂರೂ ಕ್ಷೇತ್ರಗಳ ಉಪಚುನಾವಣೆ ಜಿಟಿಜಿಟಿ ಮಳೆ ಹಾಗೂ ಚುಮುಚುಮು ಚಳಿಯ ನಡುವೆಯೂ ರಾಜಕೀಯ ಕಾವನ್ನು ಹೆಚ್ಚಿಸಿದೆ.

RELATED ARTICLES

Latest News