Friday, March 28, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಕೃಷಿ ಕಾಲೇಜು ಹಾಸನದಲ್ಲೇ ಉಳಿಯಬೇಕು, ಇಲ್ಲದಿದ್ದರೆ ಉಗ್ರ ಹೋರಾಟ : ರೇವಣ್ಣ ಎಚ್ಚರಿಕೆ

ಕೃಷಿ ಕಾಲೇಜು ಹಾಸನದಲ್ಲೇ ಉಳಿಯಬೇಕು, ಇಲ್ಲದಿದ್ದರೆ ಉಗ್ರ ಹೋರಾಟ : ರೇವಣ್ಣ ಎಚ್ಚರಿಕೆ

Agriculture College should remain in Hassan

ಹಾಸನ,ಮಾ.25- ಕೃಷಿ ಕಾಲೇಜು ಜಿಲ್ಲೆಯಲ್ಲಿಯೇ ಉಳಿಯಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ರೈತರೆಲ್ಲಾ ಸೇರಿ ಬೃಹತ್ ಪ್ರತಿಭಟನಾ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಕೃಷಿ ಕಾಲೇಜು 20 ವರ್ಷದಿಂದ ಉತ್ತಮವಾಗಿ ನಡೆಯುತ್ತಿದೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ದುರುದ್ದೇಶದಿಂದ ಮಂಡ್ಯ ಜಿಲ್ಲೆಗೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಕೃಷಿ ಕಾಲೇಜು ಹಾಸನದಲ್ಲೇ ಉಳಿಯಬೇಕು ಎಂದು ಸದನದಲ್ಲಿ ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇವೆ. ಆದರೆ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ ರಾತ್ರೋರಾತ್ರಿ ಮಂಡ್ಯ ವಿವಿಗೆ ಸೇರಿಸಿ ಬಿಲ್ ಪಾಸ್ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ರಾಜ್ಯಪಾಲರಿಗೆ ಸಹಿ ಹಾಕಲು ಕಳುಹಿಸಿದ್ದಾರೆ. ಈ ಪ್ರಸ್ತಾವನೆಗೆ ಸಹಿ ಹಾಕದಂತೆ ರಾಜ್ಯ ಪಾಲರಿಗೆ ಈಗಾಗಲೇ ಮನವಿ ನೀಡಲಾಗಿದೆ, ರಾಜ್ಯಪಾಲರಿಗೆ ಮತ್ತೊಂದು ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹಾಸನ ಕೃಷಿ ಕಾಲೇಜು ಬೆಳವಣಿಗೆಗೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಕೋರ್ಸ್‌ಗಳನ್ನು ತರಲು ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ. ಕೃಷಿ ಕಾಲೇಜು ಅಭಿವೃದ್ಧಿ ಮಾಡಲು ನಾವು ಪ್ರಯತ್ನಿಸುತ್ತಿರುವ ನಡುವೆ ಸರ್ಕಾರದ ಈ ರೀತಿಯ ಕ್ರಮಗಳು ಸರಿಯಲ್ಲ ಎಂದು ದೂರಿದರು.

20 ವರ್ಷಗಳಿಂದ ಕೃಷಿ ಕಾಲೇಜು, ಬೆಂಗಳೂರಿನ ಜಿಕೆವಿಕೆಯಲ್ಲಿಯೇ ವಿಲೀನಗೊಂಡಿದೆ. ಇದನ್ನು ಮಂಡ್ಯ ವಿವಿಗೆ ಸೇರಿಸಲು ನಾವು ಬಿಡುವುದಿಲ್ಲ, ಬಿಜೆಪಿ ಶಾಸಕರು ನಾವು ಸೇರಿ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ರೇವಣ್ಣ ಎಚ್ಚರಿಸಿದರು.

ಹಾಲಿನ ದರ ಏರಿಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಿದ್ದೇವೆ. ಜಿಲ್ಲೆಯಲ್ಲಿ 14 ಲಕ್ಷ ಲೀಟರ್ ಉತ್ಪಾದನೆಯಲ್ಲಿ ಇಂತಿಷ್ಟು ಹಾಲನ್ನು ವಿವಿಧ ಉತ್ಪನ್ನಗಳ ತಯಾರಿಕೆಗೆ ಕಳುಹಿಸಲಾಗುತ್ತಿದೆ ಎಂಬುದನ್ನು ತಿಳಿಸಲಾಗಿದೆ. ಸಹಾಯಧನ ವಿತರಣೆ ವಿಳಂಬ ಸಂಬಂಧ ಸರ್ಕಾರವೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.

ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ರೇವಣ್ಣ, ಸಣ್ಣಪುಟ್ಟ ವಿಚಾರಕ್ಕೆ ಈ ರೀತಿ ಅಮಾನತು ಮಾಡುವುದು ಸರಿಯಲ್ಲ ಆಮಾನತ್ತನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.

ಕೃಷಿ ಕಾಲೇಜನ್ನು ಮಂಡ್ಯ ಕೃಷಿ ವಿವಿ ವ್ಯಾಪ್ತಿಗೆ ಸೇರಿಸದೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಉಳಿಸುವಂತೆ ಶಾಸಕ ಎಚ್.ಡಿ.ರೇವಣ್ಣ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಎ.ಮಂಜು, ಸ್ವರೂಪ್ ಪ್ರಕಾಶ್, ಮಾಜಿ ವಿಧಾನಪರಿಷತ್ ಸದಸ್ಯರ ತಿಪ್ಪೇಸ್ವಾಮಿ ಇದ್ದರು.

RELATED ARTICLES

Latest News